ಬಿಜೆಪಿ ಚುನಾವಣಾ ಪ್ರಚಾರ ವಾಹನಕ್ಕೆ ಕಲ್ಲೆಸೆದ ಬಿಜೆಪಿ ಕಾರ್ಯಕರ್ತರು!
ನ್ಯೂಸ್ ಕನ್ನಡ ವರದಿ-(16.04.18): ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವು ಮೇ12ರಂದು ನಿಗದಿಯಾಗಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ತಮ್ಮ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಯಾದ ಕ್ಷಣದಲ್ಲೇ ಎರಡೂ ಪಕ್ಷಗಳಲ್ಲಿ ಭಿನ್ನಮತ ಬುಗಿಲೆದ್ದಿದೆ. ಇದೀಗ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಕೂಡಾ ಸಿಡಿದೆದ್ದಿದ್ದು, ಶಿವಮೊಗ್ಗದ ಸಾಗರದಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ವಾಹನಕ್ಕೆ ಬಿಜೆಪಿ ಕಾರ್ಯಕರ್ತರೇ ಕಲ್ಲೆಸೆದು ಹಾನಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಚಲಿಸುತ್ತಿದ್ದ ಪ್ರಚಾರ ವಾಹನಕ್ಕೆ ಏಕಾಏಕಿ ಕಲ್ಲು ತೂರಿದ ಕಿಡಗೇಡಿಗಳು. ವಾಹನಕ್ಕೆ ಅಂಟಿಸಿದ್ದ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಾಗರ ಪೊಲೀಸರು ಆಗಮಿಸಿದ್ದಾರೆ. ಬೇಳೂರು ಬೆಂಬಲಿಗರು ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ. ಬಾಗಲಕೋಟ ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸಂಗಮೇಶ ನಿರಾಣಿಯವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ನಿರಾಣಿ ಬೆಂಬಲಿಗರು ಪ್ರತಿಭಟಿಸಿದ್ದಾರೆ.