ಆಸಿಫಾಗಾಗಿ ಮರುಗಿದ ಮಂಗಳೂರಿನ ಶಾಂತಿಪ್ರಿಯ ಜನರು…

ನ್ಯೂಸ್ ಕನ್ನಡ ವರದಿ-(16.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣವನ್ನು ಖಂಡಿಸುವ ಸಲುವಾಗಿ ಮಂಗಳೂರಿನ ಸಮಾನಮನಸ್ಕ ಸಂಘಟನೆಗಳು ಒಟ್ಟಾಗಿ ಇಂದು ಸಂಜೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಐದು ವರ್ಷಗಳ ಮುಂಚೆ ಅತ್ಯಾಚಾರಕ್ಕೀಡಾಗಿ ಕೊಲೆಗೈಯಲ್ಪಟ್ಟಿದ್ದ ಧರ್ಮಸ್ಥಳದ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಮೊಂಬತ್ತಿ ಉರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನನ್ನ ಮಗಳು ಸೌಜನ್ಯಾ ಮೃತಪಟ್ಟು ಐದು ವರ್ಷಗಳಾಗಿದೆ ಆದರೂ ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ. ನನ್ನ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯಲ್ಲಿ ಮಂಗಳೂರಿನ ನಾಗರಿಕರು ಪಾಲ್ಗೊಂಡಿದ್ದರು. ಎಲ್ಲರೂ ನ್ಯಾಯ ಬೇಡುವ ಘೋಷಣೆಗಳನ್ನು ಕೂಗುತ್ತಿದ್ದರು. ಯಾವುದೇ ಭಿನ್ನತೆಗಳಿದ್ದರೂ ಅನ್ಯಾಯದ ವಿರುದ್ಧ ಮಂಗಳೂರಿನ ಜನತೆ ಒಂದಾಗುತ್ತಾರೆಂದು ಈ ಪ್ರತಿಭಟನೆಯ ಮೂಲಕ ಸಾಬೀತಾಗಿದೆ.

ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮುಖಂಡ ಮುಹಮ್ಮದ್ ಕುಂಞ, ಸಾಮಾಜಿಕ ಕಾರ್ಯಕರ್ತರಾದ ಸೈಫ್ ಸುಲ್ತಾನ್, ಉಮರ್ ಯು.ಎಚ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *