ಹೆಚ್ಚಿದೆ ಸಿದ್ದರಾಮಯ್ಯ ಹಿಡಿತ: ಸಿದ್ದು ಮುಂದೆ ಮಂಡಿಯೂರಿದ ಕಾಂಗ್ರೆಸ್ ಹೈಕಮಾಂಡ್!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದ 218 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟಾನುಘಟಿ ನಾಯಕರಿಗೆ ಟಾಂಗ್ ನೀಡಿದ್ದು, ಕಾಂಗ್ರೆಸ್‍ನಲ್ಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. 218 ಕ್ಷೇತ್ರಗಳ ಪಟ್ಟಿಯನ್ನು ಗಮನಿಸಿದರೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭ್ಯರ್ಥಿಗಳ ಪಟ್ಟಿಗೆ ಹೆಚ್ಚಿನ ಬೆಂಬಲ ನೀಡಿದ್ದು, ಮುಂದಿನ ಚುನಾವಣೆಯ ಸಂಪೂರ್ಣ ನಾಯಕತ್ವವನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹೊರಿಸಿದೆ.

ಈಗಾಗಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಕಾಂಗ್ರೆಸ್ ಹೈಕಮಾಂಡ್ ಲಿಖಿತವಾಗಿ ಬರೆದುಕೊಟ್ಟಿದೆ. ಜೊತೆಗೆ ಮುಂದಿನ ಮುಖ್ಯಮಂತ್ರಿಯೂ ಸಹ ಸಿದ್ದರಾಮಯ್ಯನವರೇ ಎಂದು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದ್ದರು. ಈಗ ಅಭ್ಯರ್ಥಿಗಳ ಆಯ್ಕೆಯಲ್ಲೂ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಈ ಮೂಲಕ ಹೈಕಮಾಂಡೇ ಸುಪ್ರೀಮ್ ಎಂಬಂತಿದ್ದ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಕರ್ನಾಟಕದ ಮಟ್ಟಿಗೆ ಹೈಕಮಾಂಡ್ ಗೂ ಮೀರಿ ಬೆಳೆದಿದ್ದು ಸ್ಪಷ್ಟವಾಗಿದೆ.

ಸಿದ್ದರಾಮಯ್ಯ ಅವರ ಜೊತೆಗೆ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಹೆಚ್ಚಿನ ಆದ್ಯತೆ ಸಿಕ್ಕಿದೆ. ಬಹುತೇಕ ನಾಯಕರು ತಮ್ಮ ಹಾಗೂ ತಮ್ಮ ಕುಟುಂಬದ ಹಿತಾಸಕ್ತಿ ಕಾಪಾಡುಕೊಳ್ಳಲ್ಲಷ್ಟೇ ಸೀಮಿತವಾಗಿದ್ದು, ಬೆಂಬಲಿಗರ ಹಿತರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಗ್ರಗಣ್ಯ ಮೂಲ ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ಭುಗಿಲೆದ್ದಿವೆ. ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬಂದ ಏಳು ಮಂದಿ ಬಂಡಾಯ ಶಾಸಕರಿಗೂ ಸಿದ್ದರಾಮಯ್ಯ ಟಿಕೆಟ್ ನೀಡುವ ಮೂಲಕ ತಮ್ಮ ಭರವಸೆ ಉಳಿಸಿಕೊಂಡಿದ್ದಾರೆ. ಇನ್ನು ತೀವ್ರ ವಿವಾದಿತ ಶಾಸಕರಾದ ನೈಸ್ ಸಂಸ್ಥೆಯ ಅಶೋಕ್ ಖೇಣಿಗೆ ಬೀದರ್ ದಕ್ಷಿಣ, ಬಳ್ಳಾರಿಯ ಆನಂದ್‍ಸಿಂಗ್ ಅವರಿಗೆ ವಿಜಯನಗರ, ಬಿ.ನಾಗೇಂದ್ರ ಅವರಿಗೆ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದ್ದು, ಸಿದ್ದರಾಮಯ್ಯ ಅವರ ಮೇಲುಗೈಗೆ ಮತ್ತೊಂದು ಸೇರ್ಪಡೆಯಾಗಿದೆ.

ತಮ್ಮ ಮಗ ಯತೀಂದ್ರಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಸಿದ್ದರಾಮಯ್ಯ ಅವರು, ತಮ್ಮ ಪರಮಾಪ್ತ ಸಚಿವರಾದ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರರಿಗೆ ಚಿಕ್ಕನಾಯಕನಹಳ್ಳಿಯಿಂದ, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿಗೆ ಜಯನಗರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಿದ್ದಾರೆ. ಮತ್ತೊಬ್ಬ ಪರಮಾಪ್ತ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಚನ್ನಪಟ್ಟಣದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ತೀವ್ರ ವಿರೋಧದ ನಡುವೆಯೂ ಹೊಳೆನರಸೀಪುರ ಕ್ಷೇತ್ರದಿಂದ ಮಂಜೇಗೌಡ ಅವರನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಸಚಿವ ಡಿ.ಕೆ.ಶಿವಕುಮಾರ್ ಅವರ ತಮ್ಮ ಬೆಂಬಲಿಗರಾದ ಎನ್‍ಎಸ್‍ಯುಐನ ಅಧ್ಯಕ್ಷ ಮಂಜುನಾಥ್ ಅವರಿಗೆ ಮಹಾಲಕ್ಷ್ಮಿ ಲೇಔಟ್‍ನಿಂದ, ಮಾಜಿ ಮೇಯರ್ ಪದ್ಮಾವತಿ ಅವರಿಗೆ ರಾಜಾಜಿನಗರದಿಂದ, ತಮ್ಮ ಸಂಬಂಧಿ ಎಚ್.ಡಿ.ರಂಗನಾಥ್ ಅವರಿಗೆ ಕುಣಿಗಲ್‍ನಿಂದ, ಬಸವನಗುಡಿಯಿಂದ ಎಂ.ಬೋರೇಗೌಡ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು, ದೇವನಹಳ್ಳಿಯಲ್ಲಿ ತಮ್ಮ ಬೆಂಬಲಿಗ ವೆಂಕಟಸ್ವಾಮಿ ಅವರಿಗೆ , ಹಾಗೂ ಕಾರ್ಕಳ ಕ್ಷೇತ್ರದಿಂದ ಗೋಪಾಲ್ ಭಂಡಾರಿ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಟಾಂಗ್ ನೀಡಿದ್ದಾರೆ. ಕಳೆದ ಬಾರಿ ಟಿಕೆಟ್ ಹಂಚಿಕೆಯಲ್ಲಿ ಪರಸ್ಪರ ಹೊಂದಾಣಿಕೆ ಮೂಲಕ ಹಲವಾರು ಕ್ಷೇತ್ರಗಳ ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸಿದ್ದ ಪರಮೇಶ್ವರ್ ಅವರು ಈ ಬಾರಿ ಕೊರಟಗೆರೆ ಕ್ಷೇತ್ರಕ್ಕೆ ಟಿಕೆಟ್ ಪಡೆದುಕೊಳ್ಳುವಲ್ಲೇ ಸುಸ್ತಾಗಿದ್ದು, ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಸಂಸದ ಕೆ.ಎಚ್.ಮುನಿಯಪ್ಪ ಅವರು ತಮ್ಮ ಪುತ್ರಿಗೆ ಟಿಕೆಟ್ ಕೊಡಿಸುವ ಭರದಲ್ಲಿ ಬಹುತೇಕ ಬೆಂಬಲಿಗರನ್ನು ಕೈ ಬಿಟ್ಟಿದ್ದಾರೆ. ಕಳೆದ ಬಾರಿ ಅತ್ಯಂತ ಪ್ರಭಾವಿಯಾಗಿ ಟಿಕೆಟ್ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಈ ಬಾರಿ ನೆಪಮಾತ್ರಕ್ಕಷ್ಟೇ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಬೆಂಬಲಿಗರಿಗೆ ಅವಕಾಶ ಕೊಡಿಸಲು ಹೆಚ್ಚಿನ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಹಿರಿಯ ನಾಯಕರಾದ ಜಾಫರ್ ಶರೀಫ್ ಅವರ ಪ್ರಭಾವವೂ ಈ ಬಾರಿ ಕೆಲಸ ಮಾಡದೆ ಸಿದ್ದರಾಮಯ್ಯ ಅವರ ಬೆಂಬಲಿಗ ಭೈರತಿ ಸುರೇಶ್ ಹೆಬ್ಬಾಳದಿಂದ ಟಿಕೆಟ್ ಗಿಟ್ಟಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‍ನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅನಭಿಷಕ್ತ ನಾಯಕರಾಗಿದ್ದು, ಉಳಿದ ಘಟಾನುಘಟಿ ನಾಯಕರನ್ನು ಬದಿಗೆ ಸರಿಸಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜೋಡಿ ಪರಸ್ಪರ ಹೊಂದಾಣಿಕೆ ಮೂಲಕ ಟಿಕೆಟ್ ಹಂಚಿಕೆಯಲ್ಲಿ ಹೆಚ್ಚಿನ ಪಾಲು ಪಡೆದಿರುವುದು ಕಂಡುಬರುತ್ತಿದೆ. ಇನ್ನು ಜಾತಿವಾರು ಲೆಕ್ಕಾಚಾರದಲ್ಲೂ ಸಿದ್ದರಾಮಯ್ಯ ಹಿಂದುಳಿದ ವರ್ಗದವರಿಗೆ 52 ಟಿಕೆಟ್‍ಗಳನ್ನು ಕೊಡಿಸಿದ್ದಾರೆ. ಮಹಿಳೆಯರಿಗೆ 13, ಮುಸ್ಲಿಂ ಅಭ್ಯರ್ಥಿಗಳಿಗೆ 15, ಜೈನರಿಗೆ -2, ಕ್ರಿಶ್ಚಿಯನ್ ಸಮುದಾಯಕ್ಕೆ-2, ಲಿಂಗಾಯತರಿಗೆ 42, ರೆಡ್ಡಿ ಲಿಂಗಾಯತರಿಗೆ-6, ಒಕ್ಕಲಿಗ ಮತ್ತು ರೆಡ್ಡಿ ಒಕ್ಕಲಿಗರಿಗೆ 39, ಬ್ರಾಹ್ಮಣರಿಗೆ -7, ಪರಿಶಿಷ್ಟ ಜಾತಿ-36, ಪರಿಶಿಷ್ಟ ಪಂಗಡಕ್ಕೆ 17ಟಿಕೆಟ್‍ಗಳನ್ನು ಕೊಡಿಸಲಾಗಿದೆ.

ಈ ಬಾರಿ 70 ವರ್ಷ ದಾಟಿದ ಹಿರಿಯರಿಗೆ ಕಡಿಮೆ ಅವಕಾಶ ನೀಡಿದ್ದು, ಕೇವಲ 7 ಮಂದಿಗೆ ಮಾತ್ರ ಅವಕಾಶ ಸಿಕ್ಕಿದೆ. ಯುವಕರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. 25 ರಿಂದ 40 ವರ್ಷದೊಳಗಿನವರಿಗೆ 24, 41 ರಿಂದ 50 ವರ್ಷದೊಳಗಿನವರಿಗೆ 49, 51 ರಿಂದ 60 ವರ್ಷದೊಳಗಿನವರಿಗೆ 72, 61 ರಿಂದ 70 ವರ್ಷದೊಳಗಿನವರಿಗೆ 66 ಟಿಕೆಟ್‍ಗಳನ್ನು ನೀಡಲಾಗಿದೆ. ಈ ಮೂಲಕ ಯುವಕರಿಗೆ ಕಾಂಗ್ರೆಸ್ ಹೆಚ್ಚಿನ ಮಣೆ ಹಾಕಿದೆ.

Leave a Reply

Your email address will not be published. Required fields are marked *