ತಾನೇ ಉದ್ಘಾಟನೆ ಮಾಡಿದ ನೈಟ್ ಕ್ಲಬ್ ಗೆ ಉಲ್ಟಾ ಹೊಡೆದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್!

ನ್ಯೂಸ್ ಕನ್ನಡ ವರದಿ-(17.04.18): ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕುರಿತಾದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಉನ್ನಾವೋ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಸಾಕ್ಷಿ ಮಹಾರಾಜ್ ನೈಟ್ ಕ್ಲಬ್ ಒಂದನ್ನು ಉದ್ಘಾಟನೆ ಮಾಡಿದ್ದರು. ಉತ್ತರಪ್ರದೇಶದಲ್ಲಿ ಇಷ್ಟೆಲ್ಲಾ ಗದ್ದಲಗಳು, ಅನ್ಯಾಯಗಳು ಆಗುತ್ತಿದ್ದರೂ ಸಾಖ್ಷಿ ಮಹಾರಾಜ್ ಮಾತ್ರ ನೈಟ್ ಕ್ಲಬ್ ಉದ್ಘಾಟಿಸಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಈ ಕುರಿತು ಸ್ಪಷ್ಟನೆ ನೀಡಿದ ಸಾಕ್ಷಿ ಮಹಾರಾಜ್, ನನಗೆ ಅದು ನೈಟ್ ಕ್ಲಬ್ ಎಂದು ಗೊತ್ತೇ ಇರಲಿಲ್ಲ ಎಂದಿದ್ದಾರೆ.

ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಹಾರಾಜ್‌ ‘ನನಗೆ ನೈಟ್‌ ಕ್ಲಬ್‌ ಬಗ್ಗೆ ತಿಳಿದಿರಲಿಲ್ಲ. ರೆಸ್ಟೋರೆಂಟ್‌ ಉದ್ಘಾಟನೆಗೆಂದು ಕರೆದು ಮೋಸ ಮಾಡಲಾಗಿದೆ. ನನ್ನ ಕ್ಷೇತ್ರದ ವಕೀಲರಾದ ರಜ್ಜನ್‌ ಸಿಂಗ್‌ ಚೌಹಾನ್‌ ಅವರು ಕರೆದಿದ್ದರು. ನನಗೆ ಮಾಧ್ಯಮದಲ್ಲಿ ವಿಚಾರ ನೋಡಿಯೇ ನೈಟ್‌ ಕ್ಲಬ್‌ ವಿಚಾರ ತಿಳಿಯಿತು. ನಾನು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು. ಅವಸರವಸರದಲ್ಲಿ 2-3 ನಿಮಿಷಗಳ ಒಳಗೆ ರಿಬ್ಬನ್‌ ಕತ್ತರಿಸಿ ನಾನು ತೆರಳಿದೆ’ಎಂದು ಸ್ಪಷ್ಟನೆ ನೀಡಿದ್ದಾರೆ.

‘ನಾನು ರೆಸ್ಟೋರೆಂಟ್‌ ಪರವಾನಿಗೆ ಬಗ್ಗೆ ಕೇಳಿದಾಗ ನೀಡಿರಲಿಲ್ಲ. ಅದು ಸಂಪೂರ್ಣವಾಗಿ ಆಕ್ರಮವಾಗಿ ನಡೆಯುತ್ತಿದೆ ಎಂದು ನನಗೆ ಗೊತ್ತಾಗಿದೆ. ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *