ಹಿಂದೂ ಸಂಪ್ರದಾಯದ ‘ಅಂತಿಮ ಯಾತ್ರೆಯ’ ಕಿಟ್ ಅಮೇಜಾನ್ ನಲ್ಲಿ ಲಭ್ಯ! ಏನೆಲ್ಲಾ ಇದೆ? ಬೆಲೆ ಎಷ್ಟು ಗೊತ್ತೇ?

ನ್ಯೂಸ್ ಕನ್ನಡ ವರದಿ: ಜಗತ್ತು ತುಂಬಾ ಮುಂದುವರೆದಿದೆ. ಭಾರತವೂ ಆಧುನಿಕತೆಯನ್ನು ಮೈಗೂಡಿಸುತ್ತಿದೆ, ಹೊಸ ಹೊಸ ತಂತ್ರಜ್ಞಾನ, ಡಿಜಿಟಲ್ ಮಾರ್ಕೆಟ್, ಆನ್‌ಲೈನ್ ಮೂಲಕವೇ ಇದೀಗ ಪ್ರತಿಯೊಂದು ಕೆಲಸ ನಡೆಯುತ್ತೆ. ತಿನ್ನುವ ಊಟದಿಂದ ಹಿಡಿದು ರಾತ್ರಿ ಮಲಗುವ ದಿಂಬಿನ ವರೆಗೂ ಎಲ್ಲವೂ ಆನ್ ಲೈನ್ ಸಿಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಮನುಷ್ಯನ ಸಾವಿನ ಬಳಿಕ ನಡೆಸಲಾಗುವ ಅಂತಿಮ ವಿಧಿವಿಧಾನದ ವಸ್ತುಗಳೂ ಕೂಡ ಲಭ್ಯವಿದೆ.

ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಆ ವೇಳೆ ದುಃಖದಲ್ಲಿರುವವರ ಕೆಲಸವನ್ನು ಆನ್‌ಲೈನ್ ಕಂಪನಿಗಳು ಸುಲಭ ಮಾಡಿವೆ. ಹಳ್ಳಿಯಂತೆ ಅಂತ್ಯಸಂಸ್ಕಾರಕ್ಕೆ ಬೇಕಾಗುವ ಎಲ್ಲ ವಸ್ತುಗಳು ನಗರದಲ್ಲಿ ಸಿಗೋದು ಕಷ್ಟ. ಕೆಲವರಿಗೆ ಅಂತ್ಯ ಸಂಸ್ಕಾರಕ್ಕೆ ಏನೆಲ್ಲ ವಸ್ತುಗಳು ಬೇಕು ಎಂಬ ವಿಚಾರವೇ ತಿಳಿದಿರುವುದಿಲ್ಲ. ಅಂತವರಿಗಾಗಿಯೇ ಆನ್‌ಲೈನ್ ನಲ್ಲಿ ಇದೀಗ ಅಂತ್ಯಸಂಸ್ಕಾರದ ವಸ್ತುಗಳನ್ನು ಬಿಡುಗಡೆ ಮಾಡಲಾಗಿದೆ.

ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ಸಂಸ್ಥೆ ಈ ಸೇವೆಯನ್ನೂ ಶುರು ಮಾಡಿದೆ. ಸರ್ವಪೂಜ ಅಂತಿಮ ಕ್ರಿಯಾ ಕಿಟ್ ಮಾರಾಟ ಮಾಡುತ್ತಿದ್ದು, ಈ ಕಿಟ್ ನಲ್ಲಿ ಹಿಂದೂ ಸಂಪ್ರದಾಯದ ಅನ್ವಯ ಮನುಷ್ಯನ ಅಂತಿಮ ವಿಧಿವಿಧಾನಕ್ಕೆ ಬೇಕಾದ ಎಲ್ಲ ಪೂಜಾ ಸಾಮಗ್ರಿಗಳು ಲಭ್ಯವಿದೆ. ತನ್ನ ಈ ಕಿಟ್ ನಲ್ಲಿ ಗುಣಮಟ್ಟದ, ಕಡಿಮೆ ಬೆಲೆಯ ಅಂತ್ಯಸಂಸ್ಕಾರದ ಕಿಟ್ ನಮ್ಮಲ್ಲಿ ಲಭ್ಯ ಎನ್ನುತ್ತಿದೆ.

ಈ ಅಂತಿಮ ಕ್ರಿಯಾ ಕಿಟ್ ನಲ್ಲಿ ಏನೇನು ಇರಲಿದೆ ಗೊತ್ತಾ? ಅಂತಿಮ ಕ್ರಿಯಾ ಕಿಟ್ ನಲ್ಲಿ ಅಂತಿಮ ವಿಧಿವಿಧಾನಕ್ಕೆ ಬೇಕಾಗುವ ಎಲ್ಲ ಪದಾರ್ಥಗಳು ಇರಲಿವೆ. ಅಂದರೆ ಅರಿಶಿಣ, ಕುಂಕುಮ ಸೇರಿದಂತೆ ಎಲ್ಲ ಬಗೆಯ ಪೂಜಾ ಸಾಮಗ್ರಿಗಳು, ಮಡಿಕೆ, ದೀಪ, ನೀರಿನ ಕುಡಿಕೆಯೂ ಇರಲಿದೆ. ಇನ್ನು ಸಾವಿನ ಬಳಿ ಅನ್ನದ ಮಡಿಕೆ ಹಿಡಿಯುವ ಬಿದಿರಿನ ಕೋಲು, ಮತ್ತು ಹಗ್ಗವನ್ನು ಕೂಡ ಇಡಲಾಗಿದೆ. ಇನ್ನು ವಿಶೇಷವೆಂದರೆ ಈ ಕಿಟ್ ನಲ್ಲಿ ಚಟ್ಟದ ಸಾಮಗ್ರಿ ಕೂಡ ಇಡಲಾಗಿದ್ದು, ಬಿದಿರಿನ ಬೊಂಬುಗಳು ಕೂಡ ಇರಲಿವೆ. ಇನ್ನು ಚಟ್ಟ ಕಟ್ಟಲು ಬರದವರಿಗಾಗಿಯೇ ಚಟ್ಟವನ್ನು ಹೇಗೆ ಕಟ್ಟಬೇಕು ಎನ್ನುವ ಕುರಿತ ಮಾರ್ಗದರ್ಶಿ ಚಿತ್ರಗಳಿರುವ ಪೇಪರ್ ಕೂಡ ಇರಲಿದೆ.

ಈ ಅಂತಿಮ ಕ್ರಿಯಾ ಕಿಟ್ ಬೆಲೆ ಎಷ್ಟು?
ಅಮೇಜಾನ್ ಘೋಷಣೆ ಮಾಡಿರುವಂತೆ ಈ ಸರ್ವಪೂಜ ಅಂತಿಮ ಕ್ರಿಯಾ ಕಿಟ್ ನಲ್ಲಿ ಎಲ್ಲ ವಸ್ತುಗಳೂ ಗುಣಮಟ್ಟದ ವಸ್ತುಗಳಾಗಿದ್ದು, ಈ ಕಿಟ್ ನೆ ಬೆಲೆ 2.950 ರೂ.ಗಳಂತೆ. ಅಲ್ಲದೆ ಅಮೇಜಾನ್ ನಲ್ಲಿ ಈ ಕಿಟ್ ಗೆ ಫ್ರೀ ಡೆಲಿವರಿ ಅವಕಾಶ ಕೂಡ ಇದೆ.

ಡೆಲಿವರಿ ಯಾವಾಗ?
ಆದರೆ ಈ ಕಿಟ್ ಬೇಕು ಎಂದರೆ ಕನಿಷ್ಟ ಪಕ್ಷ ಎರಡು ದಿನ ಕಾಯಬೇಕು. ಕಿಟ್ ಆರ್ಡರ್ ಮಾಡಿದ ಕನಿಷ್ಟ 16 ಗಂಟೆಗಳವರೆಗಾದರೂ ಗ್ರಾಹಕ ಈ ಕಿಟ್ ಗಾಗಿ ಕಾಯಲೇಬೇಕಿದೆ. ಕಿಟ್ ಪ್ಯಾಕ್ ಆಗಿ ನಿಗದಿತ ಸ್ಥಳಕ್ಕೆ ಡೆಲಿವರಿ ಆಗಲು 2 ದಿನಗಳ ಕಾಲಾವಕಾಶ ಬೇಕು. ಈ ಬಗ್ಗೆ ಅಮೇಜಾನ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

Leave a Reply

Your email address will not be published. Required fields are marked *