ಒವೈಸಿಯದ್ದು ಕೋಮುವಾದಿ ಪಕ್ಷ, ಅದಕ್ಕೆ ಕರ್ನಾಟಕದಲ್ಲಿ ಬೆಲೆಯಿಲ್ಲ: ಸಿಎಂ ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ-(17.04.18): ಹೈದರಾಬಾದ್ ನ ಸಂಸದ ಅಸದುದ್ದೀನ್ ಒವೈಸಿ ಮೊದಲು ಕರ್ನಾಟಕದಲ್ಲಿ ತಮ್ಮ ಪಕ್ಷವು ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಹೇಳಿಕೆ ನೀಡಿದ್ದರು. ಬಳಿಕ ಇದೀಗ ಹೇಳಿಕೆ ಬದಲಿಸಿದ ಅವರು, ಕರ್ನಾಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪರ್ಧಿಸುವುದಿಲ್ಲ. ನಾವು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಸದುದ್ದೀನ್ ಒವೈಸಿಯವರದ್ದು ಕೋಮುವಾದಿ ಪಕ್ಷವಾಗಿದೆ. ಅದು ಜೆಡಿಎಸ್ ಅನ್ನು ಬೆಂಬಲಿಸಿದರೆ ಯಾವುದೇ ಲಾಭವಿಲ್ಲ, ರಾಜ್ಯದಲ್ಲಿ ಬೆಲೆಯೂ ಇಲ್ಲ ಎಂದು ಹೇಳಿದ್ದಾರೆ.

ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಪ್ರಚಾರದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದರು. “ಜೆಡಿಎಸ್ ಗೆ ಓವೈಸಿ ಬೆಂಬಲ ನೀಡಿದರೆ ಕಾಂಗ್ರೆಸ್ ಗೇ ಯಾವ ಹೊಡೆತವೂ ಬೀಳುವುದಿಲ್ಲ,” ಎಂದರು. ಓವೈಸಿಗೆ ರಾಜ್ಯದಲ್ಲಿ ಎಲ್ಲಿ ಸ್ಥಾನವಿದೆ. ಅವರು ಎಲ್ಲಿ ಗೆದ್ದಿದ್ದಾರೆ? ಎಂದು ಪ್ರಶ್ನಿಸಿದರು. ಓವೈಸಿ ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೆ. ಅವರು ಸಹಾಯ ತೆಗೆದುಕೊಳ್ಳುತ್ತಿದ್ದಾರಲ್ಲ, ಅದಕ್ಕೆ ಹಾಗೆ ಹೇಳ್ತಾರೆ,” ಎಂದರು.

Leave a Reply

Your email address will not be published. Required fields are marked *