ದೇಶದ ಹಲವು ಕಡೆಗಳಲ್ಲಿ ಖಾಲಿಯಾದ ಎಟಿಎಂ: ಮೂರು ದಿನದಲ್ಲಿ ಸರಿ ಮಾಡುತ್ತೇವೆ ಎಂದ ಕೇಂದ್ರ ಸರಕಾರ!

ನ್ಯೂಸ್ ಕನ್ನಡ ವರದಿ-(17.04.18): ನರೇಂದ್ರ ಮೋದಿ ಮೇತೃತ್ವದ ಬಿಜೆಪಿ ಸರಕಾರವು ನೋಟು ನಿಷೇಧಗೊಳಿಸಿದ್ದ ದಿನಗಳು ಮತ್ತೆ ಮರಳಿ ಬಂದಂತೆ ಇದೀಗ ದೇಶದ ಹಲವು ಕಡೆಗಳಲ್ಲಿ ಎಟಿಎಮ್ ಗಳಲ್ಲಿ ಹಣದ ಕೊರತೆಯು ಎದುರಾಗಿದೆ. ತೆಲಂಗಾಣ, ಹೈದರಾಬಾದ್‌, ವಾರಾಣಸಿ, ವಡೋದರ, ಭೋಪಾಲ್‌, ಪಟ್ನಾ, ದಿಲ್ಲಿಯ ಕೆಲವು ಪ್ರದೇಶಗಳು ಸೇರಿದಂತೆ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿನ ಎಟಿಎಂಗಳಲ್ಲಿ ಹಣ ಬರಿದಾಗಿದೆ; ನಗದು ಕೊರತೆ ತೀವ್ರವಾಗಿದೆ; ಸಾಮಾನ್ಯ ಆರ್ಥಿಕ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಗಳು ತಿಳಿಸಿದೆ.

ಇಂದು ಬೆಳಗ್ಗಿನಿಂದಲೇ ದೇಶದ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿ ಜನರು ಎಟಿಎಂ ಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಅನೇಕ ಎಟಿಎಂಗಳ ಮುಂದೆ “ನೋ ಕ್ಯಾಶ್‌’ ಎಂಬ ಫ‌ಲಕವನ್ನು ತೂಗು ಹಾಕಲಾಗಿರುವುದು ಕಂಡು ಬಂದಿದೆ. ಇನ್ನೂ ಅನೇಕ ಎಟಿಎಂಗಳು ತಾಂತ್ರಿಕ ಕಾರಣಗಳಿಂದಾಗಿ ಮುಚ್ಚಿವೆ. ಜನರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಗದಿಗಾಗಿ ಮುಗಿ ಬೀಳುವಾಗ ಅದನ್ನು ನಿಭಾಯಿಸುವ ಮೂಲ ಸೌಕರ್ಯ ಬ್ಯಾಂಕುಗಳಲ್ಲಿ ಇಲ್ಲ ಎಂದು ಅನೇಕ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ನಡುವೆ ಕೇಂದ್ರ ಹಣಕಾಸು ಸಹಾಯಕ ಸಚಿವ ಎಸ್‌ ಪಿ ಶುಕ್ಲಾ ಅವರು “ಈಗ ಈ ಹೊತ್ತಿನಲ್ಲಿ ನಮ್ಮ ಬಳಿಕ 1,25,000 ಕೋಟಿ ನಗದು ಲಭ್ಯತೆ ಇದೆ. ಈಗ ವಿಷಯವೇನೆಂದರೆ ಕೆಲವು ರಾಜ್ಯಗಳಲ್ಲಿ ಅತ್ಯಧಿಕ ನಗದು ಇದೆ; ಕೆಲವು ರಾಜ್ಯಗಳಲ್ಲಿ ನಗದು ಕೊರತೆ ಇದೆ. ಆದುದರಿಂದ ಸರಕಾರ ರಾಜ್ಯ ವಾರ ಸಮಿತಿಯನ್ನು ರೂಪಿಸಿದೆ; ಆರ್‌ಬಿಐ ಕೂಡ ಸಮಿತಿಗಳನ್ನು ರಚಿಸಿದೆ. ಇವುಗಳ ಮೂಲಕ ನಗದು ಇಲ್ಲದ ರಾಜ್ಯಗಳಿಗೆ ನಗದು ಪೂರೈಸುವ ಕೆಲಸ ಆರಂಭಿಸಲಾಗಿದೆ; ಇನ್ನು ಮೂರು ದಿನಗಳ ಒಳಗೆ ದೇಶಾದ್ಯಂತ ನಗದು ಲಭ್ಯತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *