ಬೀದಿ ವ್ಯಾಪಾರಿಗಳಿಗೆ ಪ್ರೀತಿಯಿಂದ ಕಿವಿಮಾತು ಹೇಳಿದ ಎಸ್ಪಿ ರವಿ ಚೆನ್ನಣ್ಣನವರ್
ನ್ಯೂಸ್ ಕನ್ನಡ ವರದಿ-: ಎಸ್ಪಿ ರವಿ ಡಿ ಚೆನ್ನಣ್ಣನವರ್ ಎಂದರೆ ಕರ್ನಾಟಕದಲ್ಲಿ ತಿಳಿಯದವರು ತುಂಬಾನೇ ಕಡಿಮೆ. ತಮ್ಮ ದಕ್ಷ, ಪ್ರಾಮಾಣಿಕತೆಯ ಕಾರ್ಯವೈಖರಿಯಿಂದ ಜನಮನಸ್ಸನ್ನು ಗೆದ್ದಿರುವ ಎಸ್ಪಿ ರವಿ ಡಿ ಚೆನ್ನಣ್ಣನವರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕವಂತೂ ಅವರ ಖ್ಯಾತಿಯು ಉತ್ತುಂಗಕ್ಕೇರಿತು. ಇದೀಗ ಬೆಂಗಳೂರಿನಲ್ಲಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್ಪಿ ರವಿ ಡಿ ಚೆನ್ನಣ್ಣನವರ್ ಮೆಜೆಸ್ಟಿಕ್ ನ ಬೀದಿ ವ್ಯಾಪಾರಿಗಳನ್ನು ಠಾಣೆಗೆ ಕರೆದು ಪ್ರೀತಿಯಿಂದ ಕಿವಿಮಾತು ಹೇಳಿದ್ದಾರೆ.
ಯಾರೂ ಯಾರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಬೆಂಗಳೂರು ಅಂದರೆ ಬೇರೆ ಪ್ರದೇಶಗಳಿಂದ ಬಂದ ಜನರಿಗೆ ಆಶಾವಾದದಂತಿರಬೇಕು. ಬೆಂಗಳುರೆಂದರೆ ಭಯಬೀಳುವ ಹಾಗಾಗಬಾರದು. ವ್ಯಾಪಾರದಲ್ಲಿ ಯಾವತ್ತೂ ಮೊಸ ಮಾಡಬೇಡಿ. ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸಬೇಕು. ಪೊಲೀಸರಿಂದಲೂ ತಪ್ಪುಗಳಾಗುತ್ತದೆ. ಕೂಡಲೇ ಈ ಕುರಿತು ನಮ್ಮ ಗಮನಕ್ಕೆ ತರಬೇಕು. ಈವರೆಗೆ ಏನಾದರೂ ತಪ್ಪುಗಳಾಗಿದ್ದಲ್ಲಿ ನಮ್ಮನ್ನು ಕ್ಷಮಿಸಿ ಎಂದು ಹೇಳಿ ಎಲ್ಲ ಪೊಲೀಸರ ಪರಿಚಯ ಮಾಡಿಕೊಟ್ಟರು.
ಬಳಿಕ ಮಾತು ಮುಂದುವರಿಸಿದ ಅವರು, ಬೆಂಗಳುರಿನಲ್ಲಿ ಶಿಕ್ಷಣ ಕೊಡಿಸುವುದೆಂದರೆ ತುಂಬಾ ತ್ರಾಸದಾಯಕ ವಿಷಯ. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಬೀದಿ ವ್ಯಾಪಾರವೇನಿದ್ದರೂ ನಿಮ್ಮಿಂದಲೇ ಕೊನೆಯಾಗಲಿ. ನಿಮಗೆ ಬೆಂಗಳೂರಿನಲ್ಲಿ ಸಾಧ್ಯವಿಲ್ಲದಿದ್ದರೆ ನಾನು ಮೈಸೂರಿನಲ್ಲಿ ವ್ಯವಸ್ಥೆ ಮಾಡಿಕೊಡುತ್ತೇನೆ. ಎಲ್ಲಾ ಮಕ್ಕಳಿಗೂ ಅವರು ಎಷ್ಟು ಕಲಿಯುತ್ತಾರೋ ಅಷ್ಟು ನಾವು ಕಲಿಸುತ್ತೇವೆ. ಕೆಲವು ದಾನಿಗಳಿಂದ ನಡೆಯುತ್ತಿರುವ ಶಾಲೆಯೊಂದನ್ನು ನಾವು ಮೈಸೂರಿನಲ್ಲಿ ತೆರೆದಿದ್ದೇವೆ. ನಿಮ್ಮ ಮಕ್ಕಳಿದ್ದರೆ ನಾವು ದಾಖಲು ಮಾಡುತ್ತೇವೆ ಎಂದರು. ಇನ್ನೂ ಅವರು ಹೇಳಿರುವಂತಹ ಹಲವಾರು ವಿಚಾರಗಳು ಈ ವೀಡಿಯೊದಲ್ಲಿದೆ.