ಆಸೀಫಾ ಆರೋಪಿಗಳಿಗೆ ಶಿಕ್ಷೆ ಆಗ್ರಹಿಸಿ ಎರ್ಮಾಳಿನಲ್ಲಿ ಪ್ರತಿಭಟನೆ
ಪಡುಬಿದ್ರಿ : ಜಮ್ಮುವಿನಲ್ಲಿ ನಡೆದ ಪುಟ್ಟ ಬಾಲಕಿಯ ಅತ್ಯಾಚಾರ ಹತ್ಯೆಯನ್ನು ಖಂಡಿಸಿ ಪಡುಬಿದ್ರಿ ಸಮೀಪದ ಎರ್ಮಾಳು ಜಾಮಿಯಾ ಮಸೀದಿ ಮುಂಭಾಗದಲ್ಲಿ ಮೇಣದ ಬತ್ತಿ ಹಿಡಿಯುವ ಮೂಲಕ ಸಾರ್ವಜನಿಕರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಸೀದಿ ಖತೀಬರಾದ ಶಬ್ಬೀರ್ ಫೈಝಿಯವರು ಮೃತ ಬಾಲಕಿಗಾಗಿ ಪ್ರಾರ್ಥಿಸಿ ಮಾತನಾಡುತ್ತಾ,ಇಸ್ಲಾಮಿನ ಸಂದೇಶವಾಹಕರಾದ ಪ್ರವಾದಿ ಮೊಹಮ್ಮದ್ ( ಸ.ಅ) ರು ಹೆಣ್ಣುಮಕ್ಕಳಿಗೆ ಮಹತ್ತರವಾದ ಸ್ಥಾನ ಮಾನ ನೀಡಿದ ಧರ್ಮವಾಗಿದೆ ಇಸ್ಲಾಂ. ಅಲ್ಲದೆ ನಮ್ಮ ದೇಶ ಕೂಡ ಮಾನವೀಯತೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಆದರೆ ಇವತ್ತು ಏನು ಅರಿಯದ ಪುಟ್ಟ ಕಂದಮ್ಮನನ್ನು ಹಿಂದೂ ಧರ್ಮಯರು ಪೂಜಿಸುವ ಪುಣ್ಯಸ್ಥಳದೊಳಗೆ ಸಮೂಹಿಕವಾಗಿ ಅತ್ಯಾಚಾರ ಮಾಡಿ ಹತ್ಯೆಗೈದ ದುಷ್ಟರಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಅವರಿಗೆ ಕಠಿಣ ಶಿಕ್ಷೆ ವಿಧಿಸ ಬೇಕೆಂದು ಖತೀಬರು ಆಗ್ರಹಿಸಿದಲ್ಲದೆ ನಾವೂ ಕೂಡ ಇಂತಹ ದುಷ್ಟರಿಂದ ಎಚ್ಚರಿಕೆ ವಹಿಸುವುದರೊಂದಿಗೆ ಜಾಗೃತರಾಗಬೇಕಾಗಿದೆ ಎಂದರು.
ನೂರಾರು ಜನ ಭಾಗವಹಿಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಂದಾಳು ಆಸೀಫ್ ಎರ್ಮಾಳು, ಇಲಿಯಾಸ್ ಪಲಿಮಾರು, ಪಿಎಫ್ಐ ಮುಖಂಡ ತೌಫೀಕ್ ಪಡು ಉಚ್ಚಿಲ, ಮುಶೀರ್ ಎರ್ಮಾಳು, ಆಸೀಫ್ ಬಿ.ಎಂ ಉಚ್ಚಿಲ, ಅನ್ಸಾರ್ ಎರ್ಮಾಳ್, ಅಬ್ದುಲ್ ಖಾದರ್ ಮೀರಾ, ಉಪಸ್ಥಿತರಿದ್ದರು .