ಕಾಪು ಕ್ಷೇತ್ರದಲ್ಲಿ ಟಿಕೇಟ್ ಗೊಂದಲ: ಅಂತಿಮಗೊಳ್ಳದ ಬಿಜೆಪಿ ಅಭ್ಯರ್ಥಿ
ನ್ಯೂಸ್ ಕನ್ನಡ ವರದಿ-(17.04.18): ಕಾಪು: ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಹೈಕಮಾಂಡ್ ಲೆವೆಲ್ ಭಾರೀ ಲಾಭಿ ನಡೆಸುತ್ತಿದ್ದು ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಬಿಜೆಪಿಯಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಲಾಲಾಜಿ ಮೆಂಡನ್ ಟಿಕೇಟ್ ಗಾಗಿ ಪೈಪೋಟಿ ನಡೆಸುತ್ತಿದ್ದರೆ ಕಾಪು ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ ಬಿಜೆಪಿ ಪಕ್ಷದಲ್ಲಿ ಸ್ಪರ್ಧಿ ಯಾರಾದರೂ ಸರಿ ಕಾಪು ಕ್ಷೇತ್ರದ ಮತದಾರರೇ ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಲಿದ್ದಾರೆ ಎನ್ನುತ್ತಾರೆ.
ಮೂಲ ಬಿಜೆಪಿಗರು ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಬೆಂಬಲಿಸಿದರೆ. ಬಿಜೆಪಿಯ ಕೆಲವೊಂದು ನಾಯಕರ ಸಮೂಹ ಪಕ್ಷ ಸಂಘಟನೆಗಾಗಿ ಶ್ರಮಿಸಿದ ಸುರೇಶ್ ಶೆಟ್ಟಿ ಗುರ್ಮೆ ಪರವಾಗಿ ಟಿಕೇಟ್ ದಾರಿ ನೋಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಸೋಲುಂಡ ಲಾಲಾಜಿ ಆರ್ ಮೆಂಡನ್, ಪಕ್ಷ ಸಂಘಟನೆಯಲ್ಲಿನ ಹಿಂಜರಿಕೆಯ ಬಗ್ಗೆ ಕಾರ್ಯಕರ್ತರಲ್ಲಿ ಚರ್ಚೆ ನಡೆಯುತ್ತಿದ್ದು, ಗುರ್ಮೆಯವರ ಪರ ಒಲವು ತೊರ್ಪಡಿಸುತ್ತಿದ್ದಾರೆ. ಜಿಲ್ಲೆಯ ಬೈಂದೂರು ಮತ್ತು ಕುಂದಾಪುರದಲ್ಲು ಬಂಟ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದ್ದು ಉದ್ಯಮಿ ಗುರ್ಮೆಯವರಿಗೆ ಹಿನ್ನಡೆಯಾಗಿದ್ದು ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ಗೀತಾಂಜಲಿ ಸುವರ್ಣ ಅವರಿಗೆ ಟಿಕೇಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಇತ್ತ ಮೊಗವೀರ ಮುಖಂಡ ಯಶ್ ಪಾಲ್ ಸುವರ್ಣ ಕೂಡಾ ಟಿಕೇಟ್ ಸರದಿಯಲ್ಲಿದ್ದು, ಬಿಜೆಪಿ ಕಾರ್ಯಕರ್ತರನ್ನು ಸಾಕಷ್ಟು ಗೊಂದಲಕ್ಕೀಡುಮಾಡುವಂತೆ ಮಾಡಿದೆ.
ಬಿಜೆಪಿಯಿಂದ ಗುರ್ಮೆಯವರಿಗೆ ಟಿಕೇಟ್ ಸಿಗದಿದ್ದಲ್ಲಿ ಶೆಟ್ರು ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆ ಕೂಡ ಜನರಲ್ಲಿ ಮನೆ ಮಾಡಿದೆ. ಅಲ್ಲದೆ ಇತ್ತ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಕಾಪು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದು , ಪುರಸಭೆ ಮತ್ತು ತಾಲೂಕು ರಚನೆ ಸೇರಿದಂತೆ ಕಾಪು ಕ್ಷೇತ್ರದ ಹಲವಾರು ಬದಲಾವಣೆಯನ್ನು ಮುಂದಿಟ್ಟು ಈ ಬಾರಿ ಮತ್ತೆ ಕಾಪುವನ್ನು ಕಾಂಗ್ರೆಸ್ ಪಕ್ಷದ ಪರ ಎರಡನೇ ಬಾರಿ ಪ್ರತಿನಿಧಿಸುತ್ತಿದ್ದಾರೆ.