ದೇಗುಲಗಳನ್ನು ಗೌರವಿಸಿಕೊಂಡು, ಅತ್ಯಾಚಾರಿಯನ್ನು ಗಲ್ಲಿಗೇರಿಸಲು ಒತ್ತಾಯಿಸಿ…

ಮಸೀದಿಯಲ್ಲಿ ಒಬ್ಬ ಧರ್ಮ ಗುರು ಯುವತಿಯೊಬ್ಬಳ ಅತ್ಯಾಚಾರ ಮಾಡಿದಾಗ ಮಸೀದಿಗಳು ಅತ್ಯಾಚಾರದ ತಾಣಗಳು ಎಂದು ಮಾಧ್ಯಮಗಳು ಮತ್ತು ಜನರು ಹೇಳಿದಾಗ ಒಟ್ಟು ಮುಸ್ಲಿಮರು ಕೆರಳುತ್ತಾರೆ. ಕಾರಣ ಮಸೀದಿಯ ಪರಿಶುದ್ದತೆ ಮತ್ತು ಮಹತ್ವ ಮುಸ್ಲಿಮರಿಗೆ ಗೊತ್ತಿದೆ. ಹಾಗೇ ಹಿಂದುಗಳ ಆರಾಧನಾ ಸ್ಥಳವನ್ನು ಅತ್ಯಾಚಾರದ ಕೇಂದ್ರ ಎಂದಾಗ ಒಟ್ಟು ಹಿಂದೂಗಳಿಗೂ ಘಾಸಿಯಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಅರಿತು ಮುಸ್ಲಿಮರು ವರ್ತಿಸಬೇಕಾಗಿದೆ. ತಮ್ಮ ಪ್ರತೀ ವಿರೋದದಲ್ಲೂ ದೇಗುಲದ ಪವಿತ್ರತೆಯನ್ನು ಒತ್ತಿ ಹೇಳಿ ಆಸಿಫಾಳ ಹತ್ಯೆಯನ್ನು ಖಂಡಿಸಬೇಕಾಗಿದೆ.

ದೇಗುಲಗಳು ಮತ್ತು ಮಸೀದಿಗಳು ಮತಾಂಧ ಮತ್ತು ಮನುಷ್ಯತ್ವ ವಿರೋದಿಗಳಿಂದ ರಕ್ಷಿಸುವ ಕಾರ್ಯ ಎರಡೂ ಧರ್ಮೀಯರಿಂದ ನಡೆಯಬೇಕು. ಮಂದಿರದಲ್ಲಿ ಅಕ್ರಮ ನಡೆದಾಗ ಮಂದಿರವನ್ನು ಸಮರ್ಥಿಸುವ ಮತ್ತು ಅಕ್ರಮಿಯನ್ನು ವಿರೋದಿಸುವ ಮೂಲಕ ಮುಸ್ಲಿಮರು ಹಿಂದುಗಳ ಹೃದಯ ಗೆಲ್ಲುವ ಕಾರ್ಯ ಮಾಡಬೇಕು ಆಗಲೇ ಸಂಘಪರಿವಾರದ ಮನುಷ್ಯ ವಿರೋದಿ ಕೃತ್ಯವನ್ನು ನಿರಾಯಾಸವಾಗಿ ತಡೆಯಲು ನಮ್ಮಿಂದ ಸಾಧ್ಯ.

ಪೋಲೀಸ್ ಠಾಣೆಗೆ ಒಬ್ಬಾಕೆ ತನ್ನ ಮೇಲಾದ ದೌರ್ಜನ್ಯವನ್ನು ಹೇಳಲು ಹೋದಾಗ ಆ ಠಾಣೆಯ ಅಧಿಕಾರಿ ಆಕೆಯನ್ನು ಅತ್ಯಾಚಾರ ಮಾಡಿದ. ಇದಕ್ಕೆ ಯಾರು ಹೊಣೆ ? ಪೋಲೀಸ್ ಠಾಣೆಯೋ ? ಪೋಲೀಸ್ ಇಲಾಖೆಯೋ ? ಅಥವಾ ಖಾಕಿ ಬಟ್ಟೆಯೋ ? ಒಟ್ಟು ಜನರು ಪೋಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಾರೆ, ಠಾಣೆಯನ್ನು ಹೊತ್ತಿಸುತ್ತಾರೆ, ಮಾಧ್ಯಮಗಳು ಪೋಲೀಸರಿಂದ ಅತ್ಯಾಚಾರ ಎಂದು ಹೇಳುತ್ತದೆ. ಜನರು ಪೋಲೀಸ್ ಇಲಾಖೆಯನ್ನು ಅತ್ಯಾಚಾರದ ಇಲಾಖೆ ಎಂದು ಹೇಳುತ್ತಾರೆ.

ಈಗ ಭಾರತದ ಸಂವಿಧಾನ ಏನು ಹೇಳುತ್ತದೆ ? ಕಾನೂನು ಪಾಲಕ ಅತ್ಯಾಚಾರ ಮಾಡಬೇಕು ಎಂದು ಎಲ್ಲೂ ಹೇಳಲಿಲ್ಲ. ಖಾಕಿ ಹಾಕಿ ಅತ್ಯಾಚಾರ ಮಾಡಬೇಕು ಎಂದೂ ಹೇಳಲಿಲ್ಲ. ಹೀಗಿದ್ದೂ ಕಾನೂನು ಮತ್ತು ಖಾಕಿ ಅತ್ಯಾಚಾರಿ ಆಗುವುದು ಹೇಗೆ ? ಕಾನೂನು ಪಾಲಿಸಬೇಕಾದ ವ್ಯಕ್ತಿ ಮತ್ತು ಖಾಕಿಯ ಮೂಲಕ ಮಹಿಳೆಯನ್ನು ಸಂರಕ್ಷಿಸಬೇಕಾದ ವ್ಯಕ್ತಿ ಅದನ್ನು ಮೀರಿ ಮೃಗದಂತೆ ವರ್ತಿಸಿ ಮಾಡಿದ ಅತ್ಯಾಚಾರಕ್ಕೆ ಆ ವ್ಯಕ್ತಿ ಹೊಣೆಗಾರ.

ಪೋಲೀಸನು ಅತ್ಯಾಚಾರ ಮಾಡಿದಾಗ ಶಿಕ್ಷೆ ಇಲ್ಲಾ ಎಂದು ನಮ್ಮ ಸಂವಿಧಾನ ಹೇಳಲಿಲ್ಲ. ಪೋಲೀಸ್ ಆಗಿರಲಿ ಸಾಮಾನ್ಯ ಆಗಿರಲಿ ಅತ್ಯಾಚಾರ ಮಾಡಿದವ ಅತ್ಯಾಚಾರಿ ಮತ್ತು ಕಾನೂನು ಪ್ರಕಾರ ಆತ ಶಿಕ್ಷಿಸಲ್ಪಡುತ್ತಾನೆ. ಪೋಲೀಸ್ ಠಾಣೆಯಲ್ಲಿ ಪೋಲೀಸ್ ಅತ್ಯಾಚಾರ ಮಾಡಿದಾಗ ಅದು ಗಂಭೀರ ವಿಷಯವಾಗುತ್ತದೆ ಮತ್ತು ಹೆಚ್ಚು ಪ್ರಚಾರಕ್ಕೆ ಬರುತ್ತದೆ. ವ್ಯತ್ಯಾಸ ಇರುವುದು ಇಲ್ಲೇ. ಹಾಗೇ ಮಂದಿರದಲ್ಲಿ ಮತ್ತು ಮಸೀದಿಯಲ್ಲಿ ಎಲ್ಲೇ ಅತ್ಯಾಚಾರವಾಗಲಿ ಅದು ಆ ಪವಿತ್ರ ಸ್ಥಳದ ತಪ್ಪಲ್ಲ.

ಜಮ್ಮುವಿನ ಆಶಿಫಾ ಜಸ್ಟೀಸ್ ಕೇಳುವ ಜನರು ದೇಗುಲದ ಪಾವಿತ್ರ್ಯತೆಯನ್ನು ಹೆಚ್ಚು ಒತ್ತಿ ಹೇಳಬೇಕು. ಇದೇ ಸ್ಥಿತಿ ಒಂದು ಮಸೀದಿಗೆ ಬಂದಿದ್ದರೆ ಮುಸ್ಲಿಮರು ಏನು ಮಾಡುತ್ತಿದ್ದರು ? ಮಸೀದಿಯ ತಪ್ಪಲ್ಲಾ, ಮಸೀದಿ ಪವಿತ್ರ ಎಂದೂ ಹೇಳುವ ಮೂಲಕ ಸಮರ್ಥಿಸುತ್ತಿದ್ದರು. ಹಾಗಾಗಿ ಮಂದಿರದ ಸಮರ್ಥನೆಗೆ ಮುಸ್ಲಿಮರು ಹೆಚ್ಚು ಮಹತ್ವ ಕೊಟ್ಟು ಆಶಿಫಾ ಎಂಬ ಬಾಲೆಗೆ ನ್ಯಾಯ ಒದಗಿಸಿಕೊಡಲು ತಮ್ಮ ಹೋರಾಟ ಶಾಶ್ವತ ಇರಿಸಬೇಕು.

ಟೋಪ್ಪಿ ಮತ್ತು ಗಡ್ಡ ಬಿಟ್ಟವ ಮಾಡುವ ಅತ್ಯಾಚಾರಕ್ಕೆ ಇಸ್ಲಾಮ್ ಹೊಣೆಯಲ್ಲ ಹಾಗೇ ಗಂಧ ಹಣೆಗೆ ಹಾಕಿದ ಪೂಜಾರಿ ಮಾಡಿದ ಅತ್ಯಾಚಾರಕ್ಕೆ ಹಿಂದೂ ಧರ್ಮ ಜವಾಬ್ದಾರಿಯಲ್ಲ. ಉದ್ದೇಶ ಯಾವುದೇ ಇರಲಿ ಅದನ್ನು ಭಾರತೀಯರಾದ ನಾವು ಜೊತೆಯಾಗಿ ವಿಫಲಗೊಳಿಸ ಬಹುದು. ಆದರೆ ಪೂಜಾರಿ ಮತ್ತು ಪೋಲೀಸ್ ಮಾಡಿದ ಕರ್ಮಕ್ಕೆ ದೇಗುಲ ಮತ್ತು ಕಾನೂನು ಪಾಲಕರನ್ನು ನಿಂದಿಸುವ ಹೇಳಿಕೆ ಕೊಡುವುದು ಒಂದು ಬೃಹತ್ತ್ ಆಪತ್ತನ್ನು ಮೈಗೆ ಎಳೆಯುವ ಸಾಹಸವಾಗಿದೆ.

ಹನೀಫ್ ಪುತ್ತೂರ್
ಸುನ್ನೀಟುಡೇ

Leave a Reply

Your email address will not be published. Required fields are marked *