ಬೆಂಗಳೂರಿಗೆ ತೆರಳಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ: ಕೋಲ್ಕತ್ತದಲ್ಲೇ ಉಳಿದ ಮುಹಮ್ಮದ್ ಶಮಿ!
ನ್ಯೂಸ್ ಕನ್ನಡ ವರದಿ-(17.04.18): ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಸದ್ಯ ಐಪಿಎಲ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಶಮಿಯ ಕೌಟುಂಬಿಕ ಸಮಸ್ಯೆಗಳು ಇನ್ನೂ ಮುಗಿದಿಲ್ಲ. ಪತ್ನಿಯಿಂದ ಕೌಟುಂಬಿಕ ಹಿಂಸೆ ಮತ್ತು ವಿವಾಹೇತರ ಸಂಬಂಧಗಳ ಆರೋಪಕ್ಕೆ ಗುರಿಯಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಕೋಲ್ಕತ ಪೊಲೀಸರು ಪ್ರಶ್ನಿಸಿಲು ಕರೆಸಿಕೊಂಡಿರುವ ಕಾರಣ ಶಮಿ ಇಂದು ಮಂಗಳವಾರ ಇಲ್ಲೇ ಉಳಿಯುವುದು ಅನಿವಾರ್ಯವಾಯಿತು. ಅವರ ಐಪಿಎಲ್ ತಂಡ ಇಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿತು ಎಂದು ವರದಿಗಳು ತಿಳಿಸಿವೆ.
ನಿನ್ನೆ ಸೋಮವಾರ ರಾತ್ರಿ ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ ನೈಟ್ ರೈಡರ್ಸ್ ಎದುರಿನ ಐಪಿಎಲ್ ಪಂದ್ಯವನ್ನು ಆಡಿದ ಡೆಲ್ಲಿ ಡೇರ್ಡೆವಿಲ್ಸ್ ತಂಡದ ವೇಗದ ಎಸೆಗಾರ ಶಮಿ ಅವರನ್ನು ಪೊಲೀಸರು ಕರೆಸಿಕೊಂಡಿರುವ ಕಾರಣ ಶಮಿ ಇಲ್ಲೇ ಉಳಿದಿದ್ದಾರೆ. ಎಪ್ರಿಲ್ 21ರಂದು ಬೆಂಗಳೂರಿನಲ್ಲಿ ರಾಯಲ್ ಚ್ಯಾಲೆಂಜರ್ಸ್ ತಂಡದೆದುರಿನ ಪಂದ್ಯವನ್ನು ಆಡಲು ಶಮಿ ಅವರ ಡಿಡಿ ತಂಡ ಇಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿದೆ ಎಂದು ಬಂಗಾಲ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.