ಅಮಿತ್ ಷಾ ಅವಮಾನಿಸಿ ಕಡೆಗಣಿಸಿದರೂ ಬಿಜೆಪಿ ಪರ ಪ್ರಚಾರಕ್ಕೆ ತಯಾರಾದ ಜನಾರ್ದನ ರೆಡ್ಡಿ!
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಒಂದು ಕಾಲದಲ್ಲಿ ಬಳ್ಳಾರಿಯನ್ನು ಅಕ್ಷರಶಃ ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿಯ ಭದ್ರಕೋಟೆಯಾಗಿ ಮಾಡಿ ನಂತರ ಜೈಲು ಪಾಲಾಗಿ ಬಿಜೆಪಿಯಿಂದಲೇ ತಿರಸ್ಕರಿಸಲ್ಪಟ್ಟ ಗಣಿಧನಿ ಜನಾರ್ದನ ರೆಡ್ಡಿ ಇದೀಗ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಬರಲು ತಯಾರಾದರೂ ಪಕ್ಷದ ಹೈಕಮಾಂಡ್ ಸಾರಾಸಗಟವಾಗಿ ಇವರ ಬೇಡಿಕೆ ತಿರಸ್ಕರಿಸಿದೆ, ಅತ್ತ ಕಾಂಗ್ರೆಸ್ ತನ್ನ ಬಾಗಿಲನ್ನು ಸಂಪೂರ್ಣ ಮುಚ್ಚಿದೆ. ಹಾಗಾಗಿ ಈ ಬಾರಿ ತನ್ನ ಗೆಳೆಯ ಶ್ರೀರಾಮುಲು ಅವರನ್ನು ಬಲ ಪಡಿಸಲು ಮತ್ತು ಬಿಜೆಪಿಗೆ ಚುನಾವಣೆಯಲ್ಲಿ ಸಹಕರಿಸಿ ಆ ಮೂಲಕ ಚುನಾವಣೆ ನಂತರ ಪಕ್ಷಕ್ಕೆ ಸೇರುವ ಆಸೆಯೊಂದಿಗೆ ಜನಾರ್ದನ ರೆಡ್ಡಿ ಬಿಜೆಪಿ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.
ಇಂದು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿಯವರು, ಡಾ.ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಮಾತನಾಡಿ, ಈ ದಿನ ಬಸವ ಜಯಂತಿ. ನಡೆದಾಡುವ ದೇವರು, ಬಸವಣ್ಣನವರ ಕಾಯಕ ತತ್ವಪರಿಪಾಲಿಸಿಕೊಂಡು ಬಂದ ಶಿವಕುಮಾರ ಸ್ವಾಮೀಜಿ ಅಶೀರ್ವಾದ ಪಡೆದುಕೊಂಡಿದ್ದೇನೆ. ಪಕ್ಷಕ್ಕಾಗಿ ಇಂದಿನಿಂದಲೇ ಶ್ರಮಿಸುತ್ತೇನೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪರವರೇ ಮುಖ್ಯಮಂತ್ರಿ ಆಗುವುದು ಖಚಿತ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇನ್ನು ಪಕ್ಷಕ್ಕೆ ತಾವು ಮರಳಿ ಬಂದಿರುವುದು ಎಂದು ಪರೋಕ್ಷವಾಗಿ ಹೇಳಿಕೊಳ್ಳಲು ಜನಾರ್ದನರೆಡ್ಡಿ, ಪಕ್ಷದವರು ಏನೇ ಜವಾಬ್ದಾರಿವಹಿಸಿದರೂ ಕೂಡ ಕೆಲಸ ಮಾಡುತ್ತೇನೆ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ಮಾಡಲಿದ್ದೇನೆ. ವಿಶೇಷವಾಗಿ ಮೊಳಕಾಲ್ಮೂರಿನಲ್ಲಿ ಅತ್ಮೀಯ ಗೆಳೆಯ ಶ್ರೀರಾಮುಲು ಪರ ಪ್ರಚಾರಕ್ಕೆ ಒತ್ತು ನೀಡಿದ್ದೇನೆ ಎಂದು ಹೇಳಿದರು.