ದೇಶವನ್ನೇ ಬೆಚ್ಚಿಬೀಳಿಸಿದ ಪ್ರಕರಣಗಳ ಆರೋಪಿಗಳಿಗೆಲ್ಲಾ ಜಾಮೀನು, ಕಣ್ಣಿದ್ದು ಕುರುಡಾಗುತ್ತಿದೆಯೇ ಭಾರತದ ಕಾನೂನು?

ಕಳೆದ ನಾಲ್ಕು ವರ್ಷಗಳಿಂದ ನಮ್ಮ ದೇಶದ ನ್ಯಾಯ ವ್ಯವಸ್ಥೆಯು ದಶಕಗಳ ಹಿಂದಿನ ಪ್ರಕರಣಗಳನ್ನು ಬಹಳ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡುತ್ತಿದೆ. ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ದೇಶದಲ್ಲಿರುವ ಎಲ್ಲಾ ನ್ಯಾಯಾಲಯಗಳ ಮೇಲೆ ಕೇಂದ್ರ ಸರಕಾರದ ಒತ್ತಡ ಹೇರುತ್ತಿದೆ ಎಂದು ಸ್ವತಹ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಸಮಧಾನ ವ್ಯಕ್ತ ಪಡಿಸಿದ್ದರು. ತ್ವರಿತ ಗತಿಯಲ್ಲಿ ಸಾಗುತ್ತಿರುವ ದಶಕಗಳ ಹಿಂದಿನ ಪ್ರಕರಣಗಳ ವಿಚಾರಣೆಗಳು ಹಾಗೂ ತೀರ್ಪುಗಳ ವೇಗವನ್ನು ಗಮನಿಸಿದರೆ ಕೇಂದ್ರ ಸರಕಾರವು ಮುಂದಿನ ಅವಧಿಯ ಅಧಿಕಾರದ ಆಸೆಯನ್ನು ಕೈಬಿಟ್ಟಂತೆ ತೋರುತ್ತಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸಿಬಿಐ ಹಾಗೂ ಎನ್ಐಎ ತನಿಖಾ ಸಂಸ್ಥೆಗಳು ಕೂಡ ಇದಕ್ಕೆ ಹೊರತಾಗಿಲ್ಲ.

2008ರ ಸೆಪ್ಟೆಂಬರ್ 8ರಂದು ಮಾಲೇಗಾಂವ್’ನಲ್ಲಿ ಸ್ಪೋಟ ಸಂಭವಿಸಿತ್ತು. ಮೋಟಾರ್ ಸೈಕಲ್ ನಲ್ಲಿ ಅಳವಡಿಸಿದ್ದ 2 ಬಾಂಬ್ ಸ್ಫೋಟಗೊಂಡು 7 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಪ್ರಗ್ಯಾ ಸಿಂಗ್ ಠಾಕೂರ್, ಪುಣೆಯ ಅಭಿನವ್ ಭಾರತ್ ಸಂಘಟನೆ ಹಾಗೂ ಸೇನಾಧಿಕಾರಿ ಪುರೋಹಿತ್ ಹಾಗೂ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯರನ್ನು ಪೋಲೀಸರು ಬಂಧಿಸಿದ್ದರು. ನಂತರ ಇದು ಅಭಿನವ್ ಭಾರತ್ ಎನ್ನುವ ಸಂಘಟನೆಯ ಕೃತ್ಯ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ನಂತರ ನಡೆದ ವಿಚಾರಣೆಯಲ್ಲಿ ಕರ್ನಲ್ ಪುರೋಹಿತ್ ಪ್ರಕರಣದ ಆರೋಪಿಯೆಂದು ತಪ್ಪೊಪ್ಪಿ ಕೊಂಡಿದ್ದರು. 2008 ರಿಂದ ಜೈಲಿನಲ್ಲಿದ್ದ ಕರ್ನಲ್ ಪುರೋಹಿತನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದ ಕಾರಣ ಆತನಿಗೆ ಜಾಮೀನು ನಿರಾಕರಿಸಲ್ಪಟ್ಟಿತ್ತು.

ಯಾವಾಗ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವುವ ಅಧಿಕಾರ ಸ್ವೀಕರಿಸಿತೋ ಪ್ರಕರಣದ ಆರೋಪಿಗಳ ಪೈಕಿ ಒಬ್ಬೊಬ್ಬರಾಗಿ ಜಾಮೀನು ದೊರೆಯತೊಡಗಿತು ಮಾತ್ರವಲ್ಲ ಪ್ರಕರಣದ ತನಿಖೆಯು ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಾಣ ಸಿಗದಷ್ಟು ತ್ವರಿತಗತಿಯಲ್ಲಿ ಸಾಗತೊಡಗಿತು. ಬಹಳ ವೇಗವಾಗಿ ವಿಚಾರಣೆ ಮುಗಿಸಿದ ಮುಂಬೈ ಹೈಕೋರ್ಟ್ 2017ನೇ ಏಪ್ರಿಲ್ 25ರಂದು ಸಾಕ್ಷ್ಯಾಧಾರಗಳ ಕೊರೆತೆಯಿಂದಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ರಮೇಶ್ ಉಪಾಧ್ಯಾಯನಿಗೆ ಜಾಮೀನು ಮಂಜೂರು ಮಾಡುತ್ತದೆ ಆದರೆ ಕರ್ನಲ್ ಪುರೋಹಿತ್ ಗೆ ಜಾಮೀನು ನಿರಾಕರಿಸಲ್ಪಡುತ್ತದೆ. ಕೇವಲ ನಾಲ್ಕು ತಿಂಗಳು ಕಳೆದು ಅಂದರೆ 2017ರ ಆಗಸ್ಟ್ 21ರಂದು ಕರ್ನಲ್ ಪುರೋಹಿತನಿಗೂ ಮುಂಬೈ ಹೈಕೋರ್ಟ್ ಜಾಮೀನು ನೀಡುತ್ತದೆ.

ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿಗಳಾಗಿದ್ದು, ಸ್ವತಹ ತಮ್ಮ ತಪ್ಪನ್ನು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದ, ಸುಮಾರು 9 ವರ್ಷಗಳ ಕಾಲ ಜಾಮೀನು ಸಿಗದೇ ಚಡಪಡಿಸುತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಕರ್ನಲ್ ಪುರೋಹಿತನಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಜಾಮೀನು ಭಾಗ್ಯ ದೊರಕಿದೆ. ಈ ತೀರ್ಪಿನ ಬೆನ್ನಲ್ಲೇ ದೇಶದ ಜನತೆಗೆ ನ್ಯಾಯಾಲಯದ ಮೇಲೆ ಅನುಮಾನ ಶುರುವಾಗಲು ಪ್ರಾರಂಭಿಸಿತು.

ಅದಾದ ಕೆಲವೇ ತಿಂಗಳಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟದ ರೂವಾರಿಗಳಿಗೆ ಎನ್ಐಎ ನ್ಯಾಯಾಲಯವು ಜಾಮೀನು ಮಂಜೂರು ಮಾಡುವುದರೊಂದಿಗೆ ದೇಶದ ಜನತೆಗೆ ನ್ಯಾಯಾಲಯದ ಸುತ್ತ ಅನುಮಾನದ ಹುತ್ತ ಇನ್ನಷ್ಟು ಗಾಡವಾಗಲು ತೊಡಗಿದೆ. ಸುಮಾರು 11 ವರ್ಷಗಳ ಹಿಂದೆ 2007ರ ಮೇ 18ರಂದು ಹೈದರಾಬಾದಿನ ಚಾರ್‌ಮಿನಾರ್‌ ಪಕ್ಕದಲ್ಲೇ ಇರುವ ಮೆಕ್ಕಾ ಮಸೀದಿ ಮೇಲೆ ಶುಕ್ರವಾರದ ಪ್ರಾರ್ಥನೆ ವೇಳೆ ಬೀಂಬ್ ದಾಳಿ ಮಾಡಲಾಗಿತ್ತು. ಇದರಲ್ಲಿ 9 ಮಂದಿ ಪ್ರಾಣ ಕಳೆದುಕೊಂಡು, 58ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಾರಂಭದಲ್ಲಿ ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ವಹಿಸಿಕೊಂಡಿದ್ದರು. ನಂತರ 2011ರಲ್ಲಿ ಪ್ರಕರಣದ ಚಾರ್ಜ್​ಶೀಟ್​ನ್ನು ಸಿಬಿಐ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿತ್ತು. ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣವನ್ನು ವಹಿಸಿಕೊಂಡಿತ್ತು. ಪ್ರಕರಣದ ಅಡಿಯಲ್ಲಿ ಎನ್​ಐಎ 9 ಆರೋಪಿಗಳ ಹೆಸರನ್ನು ದಾಖಲಿಸಿಕೊಂಡಿತ್ತು.

ಅದರಲ್ಲಿ ಐವರು ಆರೋಪಿಗಳಾದ ಲೋಕೇಶ್​ ಶರ್ಮಾ, ಸ್ವಾಮಿ ಅಸೀಮಾನಂದ ಅಲಿಯಾಸ್​ ನಬಾ ಕುಮಾರ್​ ಸರ್ಕಾರ್​, ದೇವೇಂದ್ರ ಗುಪ್ತ, ಭರತ್​ ಮೋಹನ್​ಲಾಲ್​ ರತೇಶ್ವರ್​ ಅಲಿಯಾಸ್​ ಭರತ್​ ಭಾಯಿ ಮತ್ತು ರಾಜೇಂದ್ರ ಛೌಧರಿ ಎಂಬುವವರನ್ನು ಬಂಧಿಸಿದ್ದರು. ಉಳಿದ ಇಬ್ಬರು ಆರೋಪಿಗಳಾದ ಸಂದೀಪ್​ ವಿ ದಂಗೆ ಮತ್ತು ರಾಮಚಂದ್ರ ಕಲ್ಸಂಗ್ರ ಹಾಗೂ ಸುನೀಲ್​ ಜೋಶಿ ತಲೆಮರೆಸಿಕೊಂಡಿದ್ದರು. ಈ ಪ್ರಕರಣದಲ್ಲೂ ಕೂಡ ಪ್ರಮುಖ ಆರೋಪಿಯಾಗಿದ್ದ ಸ್ವಾಮಿ ಅಸೀಮಾನಂದ್ ಹಾಗೂ ಇತರರು ಕಳೆದ 11 ವರ್ಷಗಳಿಂದ ಜಾಮೀನು ಸಿಗದೆ ಜೈಲಿನಲ್ಲೇ ಕಾಲಕಳೆಯುತ್ತಿದ್ದರು.ಇದೀಗ ರಾಷ್ಟ್ರೀಯ ತನಿಖಾ ದಳ(ಎನ್ಐಎ) ನ್ಯಾಯಾಲಯವು ಸಾಕ್ಷ್ಯಾಧಾರ ಕೊರತೆಯ ಕಾರಣವನ್ನು ನೀಡಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ಬಂಧಮುಕ್ತಿಗೊಳಿಸಿದೆ.

ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್ಐಎ ಅಧಿಕಾರಿ ಪ್ರತಿಭಾ ಅಂಬೇಡ್ಕರ್ ಅವರನ್ನು ಎರಡು ವಾರಗಳ ಹಿಂದೆ ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ರವೀಂದ್ರ ರೆಡ್ಡಿಯವರನ್ನು ನೇಮಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳು ಎಂದು ತೀರ್ಪು ನೀಡಿದ ರವೀಂದ್ರ ರೆಡ್ಡಿ ಅದೇ ದಿನ ಸಂಜೆ ತನ್ನ ಹುದ್ದೆಗೆ ರಾಜಿನಾಮೆ ನೀಡುತ್ತಾರೆ. ಈ ರಾಜಿನಾಮೆಯಿಂದಾಗಿ ಆರೋಪಿಗಳ ಪರವಾಗಿ ತೀರ್ಪು ನೀಡುವಂತೆ ಅವರಿಗಿದ್ದ ಒತ್ತಡದ ಮನವರಿಕೆಯಾಗುತ್ತದೆ. ಕೇಂದ್ರ ಸರಕಾರದ ನಿರ್ದೇಶನದಂತೆ ರವೀಂದ್ರ ರೆಡ್ಡಿ ಈ ಅನುಮಾನಾಸ್ಪದವಾದ ತೀರ್ಪು ನೀಡಿದ್ದಾರೆಂದರೆ ತಪ್ಪಾಗಲಾರದು.

ಭಾರತದ ಸಂವಿಧಾನವು ಬಲಿಷ್ಠವಾಗಿರಬೇಕಾದರೆ ನ್ಯಾಯಾಂಗ,ಕಾರ್ಯಾಂಗ ಹಾಗೂ ಶಾಸಕಾಂಗಗಳು ಪ್ರಾಮಾಣಿಕವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಈಗ ಬರುಬರುತ್ತಾ ಭಾರತ ಸಂವಿಧಾನದ ಪ್ರಮುಖ ಅಂಗವಾದ ನ್ಯಾಯಾಂಗವು ಇತ್ತೀಚಿಗೆ ನೀಡಿದ ಕೆಲವು ತೀರ್ಪುಗಳನ್ನು ಗಮನಿಸಿದಾಗ ನಮ್ಮ ನ್ಯಾಯ ವ್ಯವಸ್ಥೆಯು ದೇಶದ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವತ್ತ ದಾಪುಗಾಲು ಇಡುತ್ತಿವೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *