ಸಂಘಪರಿವಾರ ಕಾರ್ಯಕರ್ತರ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆ: ಜಗದೀಶ್ ಅಧಿಕಾರಿ!

ನ್ಯೂಸ್ ಕನ್ನಡ ವರದಿ-(18.04.18): ಕರ್ನಾಟಕ ರಾಜ್ಯಾದ್ಯಂತ ಮೇ 12ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೂಡಲೇ ಎರಡೂ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದೀಗ ದಕ್ಷಿಣಕನ್ನಡದ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯ ಬದಲು ಉಮಾನಾಥ್ ಕೋಟ್ಯಾನ್ ಗೆ ಟಿಕೆಟ್ ನೀಡಿದ್ದು, ಇದು ಜಗದೀಶ್ ಅಧಿಕಾರಿ ಹಾಗೂ ಬೆಂಬಲಿಗರಲ್ಲಿ ತೀವ್ರ ಅಸಮಧಾನ ಮೂಡಿಸಿದೆ. ಈ ನಡುವೆ ಜಗದೀಶ್ ಅಧಿಕಾರಿ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ದಕ್ಷಿಣ ಕನ್ನಡ ಮಾತ್ರವಲ್ಲದೇ ಕರ್ನಾಟಕದಾದ್ಯಂತ ಸಂಚಲನ ಮೂಡಿಸುತ್ತಿದೆ.

ಬಿಜೆಪಿ ಪಕ್ಷದ ವಿರುದ್ಧ ಬಂಡಾಯವೇಳುವ ಸೂಚನ ನೀಡಿದ ಜಗದೀಶ್ ಅಧಿಕಾರಿ, ” ಇಲ್ಲಿ ನಡೆದ ಸಂಘಪರಿವಾರ ಕಾರ್ಯಕರ್ತರ ಕೊಲೆಗಳ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ನನಗೆ ಯಾರ ಭಯವೂ ಇಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೇ ಸಂಚಲನ ಮೂಡಿಸಿದೆ. ಈಗಾಗಲೇ ಸಂಘಪರಿವಾರ ಕಾರ್ಯಕರ್ತರ ಹತ್ಯೆ ಕುರಿತಾದಂತೆ ಹಲವಾರು ಮಂದಿ ಜೈಲುಪಾಲಾಗಿದ್ದಾರೆ. ಈ ಹೇಳಿಕೆಯು ಇದೀಗ ಹತ್ಯಾ ರಾಜಕೀಯದ ಕುರಿತಾದಂತೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ.

ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮೊದಲನೇ ಉದಾಹರಣೆಯೆಂಬಂತೆ ಬಳಸುವುದು ಕರ್ನಾಟಕದಲ್ಲಿ ಹಲವು ಸಂಘಪರಿವಾರ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಇದಕ್ಕೆ ನ್ಯಾಯ ಸಿಗಲೇಬೇಕು. ನ್ಯಾಯ ಸಿಗಬೇಕಾದರೆ ಬಿಜೆಪಿ ಆಡಳಿತಕ್ಕೆ ಬರಲೇಕು ಎಂಬುವುದಾಗಿದೆ. ಹಲವು ಪ್ರಕರಣಗಳಲ್ಲಿ ಮೃತಪಟ್ಟವರು ಹಿಂದೂ ಕಾರ್ಯಕರ್ತರಲ್ಲದಿದ್ದರೂ, ಹಿಂದೂ ಕಾರ್ಯಕರ್ತರೆನ್ನಲಾಗುತ್ತದೆ. ಇನ್ನು ವೈಯಕ್ತಿಕ ದ್ವೇಷದಲ್ಲಿ ಕೆಲವು ಕೊಲೆಗಳು ನಡೆದರೂ ಅದನ್ನು ಕೋಮು ಧ್ರುವೀಕರಣಕ್ಕಾಗಿ ಬಳಸಲಾಗುತ್ತದೆ. ಜಗದೀಶ್ ಅಧಿಕಾರಿಯ ಈ ಹೇಳಿಕೆಯ ಕುರಿತು ಪೊಲೀಸರು ವಿಶೇಷ ಮುತುವರ್ಜಿ ವಹಿಸಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *