ಬಸವಣ್ಣ ಮೂರ್ತಿಗೆ ಹಾಕಿದ ಹಾರ ಗುರಿತಪ್ಪಿ ಕೆಳಕ್ಕೆ: ಅಮಿತ್ ಶಾಗೆ ಮುಜುಗರ!
ನ್ಯೂಸ್ ಕನ್ನಡ ವರದಿ-(18.04.18): ಇಂದು ದೇಶಾದ್ಯಂತ ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಖ್ಯಾತ ದಾರ್ಶನಿಕ ಬಸವಣ್ಣರವರನ್ನು ಸ್ಮರಿಸಲಾಗುತ್ತಿದೆ. ಇದೀಗ ಬೆಂಗಳೂರಿನ ಬಸವೇಶ್ವರ ಸರ್ಕಲ್ನಲ್ಲಿ ಬಸವ ಜಯಂತಿಯ ದಿನದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಬಸವೇಶ್ವರರ ಬೃಹತ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಕ್ರೇನ್ನಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರು ಮೇಲೇರಿದ್ದರು. ಈ ವೇಳೆ ಅಮಿತ್ ಶಾ ಅವರು ಹಾಕಿದ ಹಾರ ಕೆಳಗೆ ಬಿತ್ತು. ಬೀಳುತ್ತಿದ್ದ ಹಾರವನ್ನು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆ ಬಳಿಕ ಯಡಿಯೂರಪ್ಪ ಅವರು ಗುರಿ ಮಾಡಿ ಹಾಕಿದ ಹಾರ ಬಸವೇಶ್ವರ ಪ್ರತಿಮೆಗೆ ಬಿತ್ತು. ಕೂಡಲೆ ಶಾ ಅವರು ಯಡಿಯೂರಪ್ಪ ಅವರನ್ನು ನೋಡಿ ಮುಗುಳ್ನಕ್ಕರು. ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ಸಿಳ್ಳೆ ಹೊಡೆದರು.