ಮೀಸಲಾತಿಯಿಂದಾಗಿ ನಾನು ಸಂಸದನಾಗಿದ್ದೇನೆ; ದಲಿತರಿಗಾಗಿ ಕೇಂದ್ರ ಸರಕಾರ ಏನೂ ಮಾಡಿಲ್ಲ: ಮೋದಿಗೆ ಪತ್ರ ಬರೆದ ಬಿಜೆಪಿಯ ದಲಿತ ಸಂಸದ
ನ್ಯೂಸ್ ಕನ್ನಡ ವರದಿ(07-04-2018): ಕೇಂದ್ರ ಸರಕಾರವು ದಲಿತರ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ 30 ಕೋಟಿ ದಲಿತರಿಗಾಗಿ ಕೇಂದ್ರ ಸರಕಾರ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ನಾನು ಮೀಸಲಾತಿಯಿಂದಾಗಿ ಸಂಸದನಾಗಿದ್ದೇನೆಯೇ ಹೊರತು ದಲಿತನಾದುದರಿಂದ ಅಲ್ಲ ಎಂದು ಉತ್ತರ ಪ್ರದೇಶದ ದಲಿತ ಸಂಸದ ಯಶ್ವಂತ್ ಸಿಂಗ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ನಗೀನಾ ಮೀಸಲಾತಿ ಕ್ಷೇತ್ರದ ಬಿಜೆಪಿಯ ದಲಿತ ಸಂಸದನಾದ ಯಶ್ವಂತ್ ಸಿಂಗ್ ಪತ್ರದುದ್ದಕ್ಕೂ ಕೇಂದ್ರ ಸರಕಾರದ ವಿರುದ್ಧ ತನ್ನ ಅಸಮಧಾನವನ್ನು ಹೊರಹಾಕಿದ್ದಾರೆ. ದಲಿತರನ್ನು ಕೇವಲ ಓಟಿಗಾಗಿ ಬಳಸಿಕೊಂಡಿರುವ ಪಕ್ಷವು ದಲಿತರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಮಾತ್ರವಲ್ಲ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರವು ದಲಿತರಿಗೆ ಏನೂ ಮಾಡಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ರೋಬೇರ್ಟ್ಸ್ ಗಂಜ್ ಕ್ಷೇತ್ರದ ಬುಡಕಟ್ಟು ಜನಾಂಗದ ಸಂಸದನಾದ ಚೋಟೆಲಾಲ್ ಕರ್ವರ್ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾರತಮ್ಯ ನೀತಿಯ ಬಗ್ಗೆ ಮೋದಿಯವರಿಗೆ ಪತ್ರ ಬರೆದಿದ್ದರು. ನಂತರ ಇಟವಾದ ದಲಿತ ಬಿಜೆಪಿ ಮುಖಂಡ ಅಶೋಕ್ ಕುಮಾರ್ ದೊಹ್ರೆ ಸರಕಾರದ ದಲಿತ ವಿರೋಧಿ ನೀತಿಯ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು.