ಅನಂತ್ ಕುಮಾರ್ ಹೆಗಡೆ ಬೆಂಗಾವಲು ಕಾರಿಗೆ ಢಿಕ್ಕಿಯಾದ ಲಾರಿ ಬಿಜೆಪಿ ಮುಖಂಡನಿಗೆ ಸೇರಿದ್ದು!
ನ್ಯೂಸ್ ಕನ್ನಡ ವರದಿ-(19.04.18): ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಸಮೀಪ ಸಚಿವ ಅನಂತ್ ಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆಯುವ ಮೂಲಕ ನನಗೆ ಹಾನಿಯುಂಟುಮಾಡಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಹೆಗಡೆ ಆರೋಪಿಸಿದ್ದ ಘಟನೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಅಪಘಾತ ನಡೆಸಲು ಯತ್ನಿಸಿದ ಲಾರಿಯು ಬಿಜೆಪಿಯ ಕೊಪ್ಪ ಘಟಕದ ಅಧ್ಯಕ್ಷ ರಮೇಶ್ ಅವರ ಸಹೋದರ ನಾಗೇಶ್ ಎಂಬವನ ಹೆಸರಿನಲ್ಲಿ ನೋಂದಣಿಯಾಗಿದ್ದು, ಇದು ಅನಂತ್ ಕುಮಾರ್ ಹೆಗಡೆ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ನಡೆಸುತ್ತಿರುವ ಗಿಮಿಕ್ ಇಂದೆಂಬ ಮಾತುಗಳು ಕೇಳಿಬರತೊಡಗಿದೆ.
ಹೆಗಡೆಯವರ ಕಾರಿಗೆ ಅಪಘಾತ ನಡೆಸಲು ಯತ್ನಿಸಿದ ಘಟನೆ ನಡೆದ ನಂತರ ಸಚಿವರಿಗೆ ಹಾನಿಯನ್ನುಂಟು ಮಾಡಲು ಅವರ ವಿರೋಧಿಗಳು ಮಾಡುತ್ತಿರುವ ಷಡ್ಯಂತ್ರ ಇದಾಗಿದೆ ಎಂದು ಸಚಿವರ ಬೆಂಬಲಿಗರಿಂದ ಆಕ್ರೋಶದ ಮಾತುಗಳು ಕೇಳಿಬಂದಿದ್ದವು. ಇದೀಗ ಲಾರಿಯೂ ತಮ್ಮದೇ ಪಕ್ಷದ ಮುಖಂಡನಿಗೆ ಸೇರಿದ್ದೆಂದು ಖಾತರಿಯಾಗುವ ಮೂಲಕ ಸ್ವತಹ ಸಚಿವರೇ ಮುಜುಗರಕ್ಕೊಳಗಾಗಿದ್ದಾರೆ.