ಭ್ರಷ್ಟಾಚಾರ ಮಾಡಿದ ಯಡಿಯೂರಪ್ಪ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಹೇಗೆ ಸಾಧ್ಯ?: ಸಂತೋಷ್ ಹೆಗ್ಡೆ
ನ್ಯೂಸ್ ಕನ್ನಡ ವರದಿ-(19.04.18) ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಯಡಿಯೂರಪ್ಪರನ್ನು ಭಾರತೀಯ ಜನತಾ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದು ಬೇಸರ ತರಿಸಿದೆ. ಒಬ್ಬ ಭ್ರಷ್ಟಾಚಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಹೇಗೆ ಸಾಧ್ಯ? ಎಂದು ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಖಾಸಗಿ ಸುದ್ದಿಮಾಧ್ಯಮ ದಿ ವೈರ್ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
“ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಅವ್ಯವಹಾರಗಳನ್ನು ನಡೆಸಿದ್ದಾರೆ. ಇದಕ್ಕೆ ಕುರಿತಾದಂತಹ ದಾಖಲೆಗಳು ನನ್ನ ಬಳಿ ಇದೆ. ನಾನು ಲೋಕಾಯುಕ್ತನಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ಗಣಿಗಾರಿಕಾ ಕಂಪೆನಿಯಿಂದ ಲಂಚ ಪಡೆದುಕೊಂಡಿದ್ದು ಹಾಗೂ ಆ ಕಂಪೆನಿಗೆ ಸಹಾಯ ಮಾಡಿದ್ದರ ಕುರಿತು ಸಮರ್ಪಕವಾದ ದಾಖಲೆಗಳಿವೆ. ಯಡಿಯೂರಪ್ಪ ಮತ್ತು ಮಕ್ಕಳ ಮೇಲಿನ ಕೇಸುಗಳನ್ನೆಲ್ಲಾ ಖುಲಾಸೆ ಮಾಡಿದ ರಾಜ್ಯ ಸರಕಾರದ ನಡೆಯ ಕುರಿತು ನನಗೆ ಅಸಮಧಾನವಿದೆ. ಜನರು ಈಗೀಗ ಕಾನೂನಿನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ಸೌತ್ ವೆಸ್ಟ್ ಮೈನಿಂಗ್ ಎಂಬ ಕಂಪೆನಿಯಿಂದ ಬರೋಬ್ಬರಿ 20 ಕೋಟಿ ರೂ. ಲಂಚ ಪಡೆದುಕೊಂಡಿದ್ದರು. ಇದಕ್ಕೆ ಕುರಿತಾದಂತೆ ದಾಖಲೆಗಳೂ ಇವೆ. ಇನ್ನು ಜಿಂದಾಲ್ ಸ್ಟೀಲ್ ತೋರಣಗಟ್ಟಿ ಎಂಬ ಸಂಪೆನಿಯಿಂದ 20ಕೋಟಿ ರೂ. ಮೂರು ಬೇನಾಮಿ ಅಕೌಂಟ್ ಗಳಿಗೆ ಟ್ರಾನ್ಸ್ ಫರ್ ಆಗಿತ್ತು. 10ಕೋಟಿ ರೂ.ಯ ಚೆಕ್ ಒಂದನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬ ನಡೆಸುತ್ತಿರುವ ಶಿವಮೊಗ್ಗದ ಶಾಲೆಗೆಂಧು ನೀಡಲಾಗಿತ್ತು. ಇದು ಮಾತ್ರವಲ್ಲದೇ ಹಲವು ಸರಕಾರಿ ಜಮೀನುಗಳನ್ನು ಡನೋಟಿಫೈ ಕೂಡಾ ಮಾಡಿದ್ದರು ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.