ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ಬಾದಾಮಿಯಲ್ಲೂ ಸ್ಪರ್ಧಿಸಲಿದ್ದಾರೆಯೇ ಸಿಎಂ ಸಿದ್ದರಾಮಯ್ಯ?
ನ್ಯೂಸ್ ಕನ್ನಡ ವರದಿ(19-04-2018): ಚಾಮುಂಡೇಶ್ವರಿ ಜೊತೆಗೆ ಉತ್ತರ ಕರ್ನಾಟಕದಿಂದಲೂ ಸ್ಪರ್ಧಿಸುವ ಒತ್ತಡದಲ್ಲಿದ್ದೇನೆ ಎಂದು ಬಾದಾಮಿಯ ಹೆಸರು ಪ್ರಸ್ತಾಪಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ವೈಯಕ್ತಿಕವಾಗಿ ನನಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಚೆಯಿಲ್ಲದಿದ್ದರೂ, ನನ್ನ ಆಪ್ತರ ಒತ್ತಾಯದಿಂದಾಗಿ ಉತ್ತರ ಕರ್ನಾಟಕದಿಂದಲೂ ಸ್ಪರ್ಧಿಸುವ ಒತ್ತಡದಲ್ಲಿದ್ದೇನೆ. ಆದರೆ ತೀರ್ಮಾನವು ಹೈಕಮಾಂಡ್ ಕೈಯಲ್ಲಿದೆ ಎಂದರು. ಬಾದಾಮಿಯಿಂದ ಸ್ಪರ್ಧಿಸುವಂತೆ ಸಿಎಂ ಆಪ್ತರು ಒತ್ತಾಯಿಸುತ್ತಿರುವುದರಿಂದ ಸಿದ್ಧರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವ ಕುರಿತು ಊಹಾಪೋಹಗಳು ಕೇಳಿಬರುತ್ತಿದ್ದವು.
ಬಾದಾಮಿ ಕ್ಷೇತ್ರದಿಂದ ದೇವರಾಜ್ ಪಾಟೀಲ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರೂ, ಬಿಫಾರಂ ಇನ್ನೂ ಕೂಡ ನೀಡಿಲ್ಲ. ಆದುದರಿಂದ ಸಿಎಂ ಅವರು ಚಾಮುಂಡೇಶ್ವರಿ ಜೊತೆಗೆ ಬಾದಾಮಿಯಿಂದಲೂ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.