ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಕುರಿತಾದಂತೆ ಕಾಂಗ್ರೆಸ್ ದೇಶದ ಕ್ಷಮೆ ಕೋರಬೇಕು: ಅಮಿತ್ ಶಾ
ನ್ಯೂಸ್ ಕನ್ನಡ ವರದಿ-(19.04.18): ಹೈದರಾಬಾದ್ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ, ಇದೀಗ ನ್ಯಾಯಾಲಯ ಬಂಧಿತ ಅಮಾಯಕರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ಈಗ ಕಾಂಗ್ರೆಸ್ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗ್ರಹಿಸಿದರು.
ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಮೆಕ್ಕಾ ಮಸೀದಿ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರೆಲ್ಲಾ ಟೀಕಿಸಿದ್ದರು. ಬಿಜೆಪಿ ತೀವ್ರ ನೋವು ಅನುಭವಿಸಿತ್ತು. ಅಮಾಯಕರು ಬಂಧಿತರಾಗಿದ್ದರು. ಆದರೆ, ಈಗ ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದರು.
ರಾಹುಲ್ಗಾಂಧಿ, ಚಿದಂಬರಂ, ದಿಗ್ವಿಜಯ್ಸಿಂಗ್, ಸಿದ್ದರಾಮಯ್ಯ ಅವರು ಯಾವ್ಯಾವ ದಿನಾಂಕದಂದು ಮೆಕ್ಕಾ ಮಸೀದಿ ಸ್ಫೋಟ ಹಾಗೂ ಕೇಸರಿ, ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದರು ಎಂಬುದನ್ನು ವಿವರಿಸಿದ ಅಮಿತ್ ಶಾ, ಬಿಜೆಪಿ ಇದಾವುದನ್ನೂ ಮರೆತಿಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ಉತ್ತರಿಸಲೇಬೇಕು. ಮಾಡಿದ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.