ಅಡ್ವಾಣಿಯವರೇ ಮೋದಿ ಸರಕಾರದ ವೈಫಲ್ಯದ ಕುರಿತು ಮಾತನಾಡಿ; ಇಲ್ಲದಿದ್ದರೆ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ: ಯಶ್ವಂತ್ ಸಿನ್ಹಾ
ನ್ಯೂಸ್ ಕನ್ನಡ ವರದಿ(19-04-2018): ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯದ ಕುರಿತು ಮಾತನಾಡಿ ಇಲ್ಲದಿದ್ದರೆ ಮುಂದಿನ ಯುವ ಪೀಳಿಗೆಯು ನಿಮ್ಮನ್ನು ಕ್ಷಮಿಸಲಾರದು ಎಂದು ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಅವರು ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿಯವರನ್ನು ಆಗ್ರಹಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಪ್ರಧಾನಿ ಸೇರಿದಂತೆ ಹಿರಿಯ ನಾಯಕರನ್ನೊಳಗೊಂಡ ಮಾರ್ಗದರ್ಶಕ್ ಮಂಡಳಿ ರಚಿಸಿದ್ದರು. ಈ ಮಂಡಳಿಯಲ್ಲಿ ಮಾಜಿ ಕೇಂದ್ರ ಸಚಿವ ಶಾಂತ ಕುಮಾರ್ ಹಾಗೂ ಸಿನ್ಹಾ ಸಹ ಇದ್ದಾರೆ.
ಮಾರ್ಗದರ್ಶಕ್ ಮಂಡಳಿ ರಚನೆಯಾದ ನಂತರ ಇದುವರೆಗೂ ಅಧಿಕೃತವಾಗಿ ಒಂದು ಬಾರಿಯೂ ಸಭೆ ಸೇರಿಲ್ಲ. ಪ್ರಸ್ತುತ ಬಿಜೆಪಿ ನಾಯಕತ್ವ ಪಕ್ಷದ ನಾಯಕರು ಮತ್ತು ಸಂಸದರು ತಮ್ಮ ಅಭಿಪ್ರಾಯ ತಿಳಿಸಲು ಇದ್ದ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದು, ಅಡ್ವಾಣಿ ಮತ್ತು ಜೋಶಿ ಅವರು ಮೌನ ಮುರಿದು ಮಾತನಾಡಬೇಕು ಎಂದು ಸಿನ್ಹಾ ಒತ್ತಾಯಿಸಿದ್ದಾರೆ.
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ.40ರಷ್ಟು ಸಂಸದರು ಮಾತ್ರ ಮರು ಆಯ್ಕೆಯಾಗಲಿದ್ದು, ಇತರರು ಸರ್ಕಾರದ ವೈಫಲ್ಯದಿಂದಾಗಿ ಸೋಲು ಅನುಭವಿಸಲಿದ್ದಾರೆ ಎಂದು ಸಿನ್ಹಾ ಭವಿಷ್ಯ ನುಡಿದಿದ್ದಾರೆ. ತಮ್ಮ ಮಾತಿನುದ್ದಕ್ಕೂ ಸಿನ್ಹಾ ಅವರು ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.