ಶಾಖಾದ್ರಿಗೆ ಬಾಬಾ ಬುಡನ್ ಗಿರಿ ಉಸ್ತುವಾರಿ
ನ್ಯೂಸ್ ಕನ್ನಡ ವರದಿ(07-04-2018): ವಿವಾದಿತ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿನ ಧಾರ್ಮಿಕ ವಿಧಿಯ ಮೇಲುಸ್ತುವಾರಿಯನ್ನು ಸೈಯ್ಯದ್ ಗೌಸ್ ಮೊಹಿಯುದ್ದಿನ್ ಶಾಖಾದ್ರಿ ಅವರಿಗೆ ವಹಿಸಿರುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಸೈಯ್ಯದ್ ಗೌಸ್ ಮೊಹಿಯುದ್ದಿನ್ ಶಾಖಾದ್ರಿ ಅವರು ನೇಮಿಸುವ ‘ಮುಜಾವರ್’ ಅವರೇ ಪಾರಂಪರಿಕ ಕ್ಷೇತ್ರವಾದ ದತ್ತಪೀಠದ ಗರ್ಭಗುಡಿಯಲ್ಲಿ ದಿನನಿತ್ಯ ಧಾರ್ಮಿಕ ವಿಧಿಯನ್ನು ನೆರವೇರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿತು.
ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುವ ಈ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಾದವನ್ನು ಇತ್ಯರ್ಥಪಡಿಸುವಲ್ಲಿ ವಿಳಂಬ ಆಗಿರುವುದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಬೇಷರತ್ ಕ್ಷಮೆ ಯಾಚಿಸಿ ಸಲ್ಲಿಸಿರುವ ಹೇಳಿಕೆಯನ್ನು ಮಾನ್ಯ ಮಾಡುವುದಾಗಿ ತಿಳಿಸಿದ ನ್ಯಾಯಪೀಠ, ಪ್ರಕರಣ ಇತ್ಯರ್ಥಪಡಿಸಿ ಸರ್ಕಾರ ನೀಡಿರುವ ವರದಿಯನ್ನೂ ಒಪ್ಪಿಕೊಳ್ಳುವುದಾಗಿ ಹೇಳಿತು.
ಪೂಜೆಗೂ ಅಧಿಕಾರ ಪೂಜೆ ಮಾಡುವ ವಿಷಯದಲ್ಲಿ ಶಾಖಾದ್ರಿ ಹೊರತುಪಡಿಸಿ ಬೇರೆ ಯಾರಿಗೂ ಗರ್ಭಗುಡಿ ಪ್ರವೇಶಿಸುವ ಅಧಿಕಾರ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಹಿಂದು ಧರ್ಮದ ಮಠಾಧಿಪತಿಗಳು/ಸಂತರು, ಧರ್ಮಗುರುಗಳು ಗರ್ಭಗುಡಿ (ಗುಹೆಯ) ಒಳಪ್ರವೇಶಿಸಿ ದತ್ತಾತ್ರೇಯ ಪಾದುಕೆಗೆ ನಮಸ್ಕರಿಸುವ ಅವಕಾಶವಿದೆ. ಆದರೆ ತೀರ್ಥ, ಪ್ರಸಾದ ಅಥವಾ ಹೂವುಗಳನ್ನು ಹಂಚುವ ಅಧಿಕಾರ ಅವರಿಗಿರುವುದಿಲ್ಲ. ಇದು ಶಾಖಾದ್ರಿಯವರ ಕೆಲಸವಾಗಲಿದೆ. ಸರ್ಕಾರದ ಆದೇಶದಲ್ಲಿ ಈ ಎಲ್ಲ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ.