ಉತ್ತರಪ್ರದೇಶ: ಚಿನ್ನದ ಸರ ಕದ್ದಿದ್ದಾನೆಂದು ಶಂಕಿಸಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಲೆ!

ನ್ಯೂಸ್ ಕನ್ನಡ ವರದಿ-(19.04.18): ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗಿವೆ. ದಿನೇದಿನೇ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಚಿನ್ನದ ಸರವನ್ನು ಕದ್ದಿದ್ದಾನೆಂದು ಆರೋಪಿಸಿ ದಲಿತ ವ್ಯಕ್ತಿಯೋರ್ವನನ್ನು ಥಳಿಸಿ ಕೊಂದ ಘಟನೆಯು ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಬಿಂದೌರ್ ಎಂಬಲ್ಲಿ ನಡೆದಿದೆ. ಕೊಲೆಗೈಯಲ್ಪಟ್ಟ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಸೋಹನ್ ಲಾಲ್ ರೈದಾ(34) ಎಂದು ಗುರುತಿಸಲಾಗಿದೆ.

ಫತೇಪುರ್ ನಲ್ಲಿ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ ಸೋಹನ್ ಲಾಲ್ ಕಾರ್ಖಾನೆಯ ಮಾಲೀಕನ ಚಿನ್ನದ ಸರವನ್ನು ಕದ್ದಿದ್ದಾನೆ ಎಂದು ಶಂಕಿಸಿ ಕೊಲೆಗೈಯಲಾಗಿದೆ. ಸೋಹನ್ ಲಾಲ್ ಮನೆಯಲ್ಲಿದ್ದ ಸಂದರ್ಭದಲ್ಲಿ ಮಾಲೀಕ ಅರವಿಂದ ಕುಮಾರ್ ಸಿಂಗ್ ಹಾಗೂ ಕೆಲವು ವ್ಯಕ್ತಿಗಳು ಮನೆಯೊಳಗೆ ನುಗ್ಗಿ ಆತನನ್ನು ಎಳೆದುಕೊಂಡು ಹೋಗಿದ್ದಾರೆ. ಬಳಿಕ ಸೋಹನ್ ಲಾಲ್ ದೇಹವು ಅರವಿಂದ್ ಕುಮಾರ್ ಸಿಂಗ್ ನ ಬಾವಿಯ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಸೋಹನ್ ಲಾಲ್ ಪುತ್ರ ತಿಳಿಸಿದ್ದಾನೆ. ಇದೇ ಅರವಿಂದ್ ಸಿಂಗ್ 2011ರಲ್ಲಿ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *