ಸೋಲಿನ ನಡುವೆಯೂ ನೂತನ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ!
ನ್ಯೂಸ್ ಕನ್ನಡ ವರದಿ-(19.04.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಸದ್ಯ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದರೂ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ವಿರಾಟ್ ಕೊಹ್ಲಿ ಸದ್ಯ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತೀಹೆಚ್ಚು ರನ್ ಗಳಿಸಿದ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಈಗಾಗಲೇ ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್ ನಲ್ಲಿ ಅತೀಹೆಚ್ಚು ರನ್ ಗಳಿಸಿದ ಖ್ಯಾತಿಯೂ ವಿರಾಟ್ ಕೊಹ್ಲಿ ಪಾಲಾಗಿದೆ. ಐಪಿಎಲ್ ನಲ್ಲಿ ಅತೀಹೆಚ್ಚು ರನ್ ಗಳಿಸಿದ ಖ್ಯಾತಿಯು ಈ ಮೊದಲು 163 ಪಂದ್ಯಗಳಲ್ಲಿ 4,558 ರನ್ ಗಳಿಸಿದಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ ಕೇವಲ 153 ಪಂದ್ಯಗಳಲ್ಲಿ 4,619 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದ್ದು, 163 ಪಂದ್ಯಗಳಲ್ಲಿ 4345 ರನ್ ಗಳಿಸಿದ್ದಾರೆ.