ಈ ಬಾರಿಯ ಕರ್ನಾಟಕ ಚುನಾವಣೆ ಹಿಂದೂ-ಮುಸ್ಲಿಮ್ ಧರ್ಮಗಳ ನಡುವೆ ನಡೆಯುತ್ತದೆ: ಶಾಸಕ ಸಂಜಯ್ ಪಾಟೀಲ್
ನ್ಯೂಸ್ ಕನ್ನಡ ವರದಿ(19-04-2018): ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯು ಹಿಂದೂ ಹಾಗು ಮುಸ್ಲಿಮ್ ಧರ್ಮ ವಿಚಾರದಲ್ಲಿ ನಡೆಯಲಿದೆ ಎಂದು ಬೆಳಗಾವಿ ಬಿಜೆಪಿ ಶಾಸಕ ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಈ ಬಾರಿಯ ಚುನಾವಣೆಯು ಅಭಿವೃದ್ಧಿ ಕಾರ್ಯಕ್ರಮಗಳಾದ ರಸ್ತೆ, ಚರಂಡಿ ನೀರಾವರಿ ಹೆಸರಿನಲ್ಲಿ ನಡೆಯುತ್ತಿಲ್ಲ ಬದಲಾಗಿ ಈ ಚುನಾವಣೆಯು ಹಿಂದೂ ಮುಸಲ್ಮಾನರ ನಡುವೆ ನಡೆಯಲಿದೆ. ಟಿಪ್ಪು ಜಯಂತಿ ಬೇಕಾದವರು ಕಾಂಗ್ರೆಸ್ ಬೆಂಬಲಿಸಿ ಹಾಗೂ ಶಿವಾಜಿ ಜಯಂತಿ ಬೇಕಾದವರು ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.
ತನ್ನ ಪ್ರತಿಸ್ಪರ್ಧಿ ಲಕ್ಷ್ಮೀ ಹೆಬ್ಬಾಲ್ಕರ್ ಅವರನ್ನು ಟೀಕಿಸುವ ಭರದಲ್ಲಿ ನಡುವೆ ಧರ್ಮದ ವಿಚಾರವನ್ನು ತರುವ ಮೂಲಕ ಶಾಸಕ ಸಂಜಯ್ ಪಾಟೀಲ್ ಎಡವಟ್ಟು ಮಾಡಿದರು. ನಾವು ರಾಮ ಮಂದಿರ ನಿರ್ಮಿಸುವ ಹಿಂದೂಗಳು. ಹೆಬ್ಬಾಲ್ಕರ್ ಅವರು ಮಸೀದಿ ನಿರ್ಮಿಸಲು ಹೊರಟಿರುವವರು. ಒಂದು ವೇಳೆ ಅವರು ಮಂದಿರ ನಿರ್ಮಿಸುವವರಾದರೆ ನೀವು ಅವರಿಗೇ ಮತ ಹಾಕಿ ಎಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಹೇಳಿದರು.