ಬಾಲಕ ಜುನೈದ್ ಖಾನ್ ರೈಲಿನ ಸೀಟಿಗಾಗಿ ನಡೆದ ಜಗಳದಲ್ಲಿ ಮೃತಪಟ್ಟಿದ್ದ: ಹೈಕೋರ್ಟ್ ತೀರ್ಪು

ನ್ಯೂಸ್ ಕನ್ನಡ ವರದಿ-(19.04.18): ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇತ್ತೀಚೆಗೆ ಹಲವಾರು ಪ್ರಮುಖ ಬೆಳವಣಿಗೆಗಳು ಕಂಡು ಬರುತ್ತಿವೆ. ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗುತ್ತಿದೆ. ಮೊನ್ನೆ ತಾನೇ ಗಂಭೀರ ಪ್ರಕರಣವಾಗಿದ್ದ ಹೈದರಾಬಾದ್ ಮಕ್ಕಾ ಮಸ್ಜಿದ್ ಸ್ಫೋಟದ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು. ಆದರೆ ಪ್ರಮುಖ ಸಾಕ್ಷಿಯೇ ನ್ಯಾಯಾಲಯಕ್ಕೆ ಹಾಜರಾಗಿಲ್ಲವೆನ್ನುವುದು ಬೇರೆ ಮಾತು. ಇದಕ್ಕೂ ಮುಂಚೆ ಹಲವಾರು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕರ್ನಲ್ ಪುರೋಹಿತ್ ಸೇರಿದಂತೆ ಹಲವಾರು ಸಂಘಪರಿವಾರ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಬಾಲಕ ಹಾಫಿಳ್ ಜುನೈದ್ ಖಾನ್ ನನ್ನು ಕೊಂದ ವ್ಯಕ್ತಿಗೂ ಬಿಡುಗಡೆ ಭಾಗ್ಯ ಕರುಣಿಸಲಾಗಿದೆ.

ಕುರಾನ್ ಕಂಠಪಾಠ ಮಾಡಿದ್ದ ಬಾಲಕ ಹಾಫಿಳ್ ಜುನೈದ್ ಈದ್ ಹಬ್ಬದ ಪ್ರಯುಕ್ತ ವಸ್ತ್ರಗಳನ್ನು ಖರೀದಿಸಲು ಹೋಗಿದ್ದ ಸಂದರ್ಭ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿತ್ತು. ಈ ಪ್ರಕರಣವು ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಪ್ರಕರಣದ ಕುರಿತಾದಂತೆ ಆರೋಪಿಗಳನ್ನು ಕೂಡಾ ಬಂಧಿಸಲಾಗಿತ್ತು. ಆದರೆ ಇದೀಗ ಈ ಪ್ರಕರಣದ ಕುರಿತು ತೀರ್ಪು ನೀಡಿದ ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯ, ಜುನೈದ್ ಖಾನ್ ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳದಲ್ಲಿ ಕೊಲೆಯಾಗಿದ್ದನೇ ಹೊರತು ಮತೀಯ ಗಲಭೆಯ ಕಾರಣದಿಂದಲ್ಲ ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೇ ಚಾಕುವಿನಿಂದ ಇರಿದ ಆರೋಪಿಗೆ ಜಾಮೀನು ಕೂಡಾ ನೀಡಲಾಗಿದೆ.

ಈ ಪ್ರಕರಣವು ಮತೀಯ ಗಲಭೆಯಾಗಿದೆ ಅನ್ನುವುದಕ್ಕೆ ಯಾವುದೇ ಪೂರಕ ಸಾಕ್ಷಿಗಳು ಲಭಿಸಿಲ್ಲ ಎಂದು ಕೋರ್ಟ್ ಈ ವೇಳೆ ಉಲ್ಲೇಖಿಸಿದೆ. ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದ್ದು, ಈ ವೇಳೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಹೆಲ್ತ್ ಇನ್ ಸ್ಪೆಕ್ಟರ್ ಆಗಿದ್ದ ರಾಮೇಶ್ವರ ದಾಸ್ ಎಂಬಾತ ಚಾಕುವಿನಿಂದ ಇರಿದಿದ್ದ. ಅಲ್ಲದೇ ಇದರಲ್ಲಿ ಮತೀಯ ಗಲಭೆಯ ಅಂಶಗಳು ಇಲ್ಲ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದ ಆರೋಪಿಗಳನ್ನು ಈ ಹಿಂದೆಯೇ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನು ಕೂಡಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *