ಜನಾರ್ದನ ರೆಡ್ಡಿಯ ಸಹೋದರ ಕರುಣಾಕರ ರೆಡ್ಡಿಗೆ ಇನ್ನೂ ಬಿಜೆಪಿ ಟಿಕೆಟ್ ಸಿಗದಿರಲು ಕಾರಣವೇನು ಗೊತ್ತೇ?

ಬಿಜೆಪಿ ಪಕ್ಷದ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆಯಾದರೂ ಹರಪನಹಳ್ಳಿ ಕ್ಷೇತ್ರ ಅಭ್ಯರ್ಥಿ ಯಾರೆಂದು ಇದುವರೆಗೂ ಘೋಷಣೆಯಾಗಿಲ್ಲ. ಈ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿ ಮಾಜಿ ಸಚಿವ ಕರುಣಾಕರರೆಡ್ಡಿ ಅಡ್ಡಗಾಲಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ರೆಡ್ಡಿ ಸಹೋದರರ ಜೊತೆಗಿನ ಹಳಸಿದ ಸಂಬಂಧ ಹಾಗು ಶ್ರೀರಾಮುಲು ಜೊತೆಗಿನ ನ್ಯಾಯಾಲಯದ ಹೋರಾಟದಿಂದಾಗಿ ಟಿಕೆಟ್ ಸಿಗುತ್ತಿಲ್ಲ ಎಂಬ ಮಾತು ಬಳ್ಳಾರಿಯಲ್ಲಿ ರಾಜಕೀಯವಾಗಿ ಚರ್ಚಿತ ವಿಷಯವಾಗಿದೆ.

ಈ ಬಾರಿ ಮಾಜಿ ಸಚಿವ ಕರುಣಾಕರ ರೆಡ್ಡಿಗೆ ಬಿಜೆಪಿ ಟಿಕೆಟ್ ಸಿಗುತ್ತಾ? ಹರಪನಹಳ್ಳಿ ಕ್ಷೇತ್ರ ಬಿಜೆಪಿ ಟಿಕೆಟ್ ತಪ್ಪಿಸಲು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅಡ್ಡಗಾಲು ಹಾಕುತ್ತಿದ್ದಾರಾ? ಹೀಗೊಂದು ಪ್ರಶ್ನೆ ಬಳ್ಳಾರಿ ಹಾಗೂ ಹರಪನಹಳ್ಳಿಯ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕಾಕತಾಳೀಯವೆಂಬಂತೆ ಕಳೆದ ವರ್ಷ ರೆಡ್ಡಿ ಹಾಗೂ ಶ್ರೀರಾಮುಲು ಅವರ ನಡುವಿನ ವೈಮನಸ್ಸು ಬಹಿರಂಗವಾಗಿದೆ.

ಬಳ್ಳಾರಿ ನಗರದ ಸುಷ್ಮಸ್ವರಾಜ್ ನಿವೇಶನ ಸಂಬಂಧ ಸಂಸದ ಬಿ ಶ್ರೀರಾಮುಲು ವಿರುದ್ಧ ನ್ಯಾಯಾಂಗದ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ರಾಮುಲು ಬೆಂಬಲಿಗರು ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದರು. ಈ ಮೊದಲಿನಿಂದಲೂ ಶ್ರೀರಾಮುಲು ಜೊತೆಗೆ ಕರುಣಾಕರ ರೆಡ್ಡಿ ಸಂಬಂಧ ಅಷ್ಟಕಷ್ಟೆ. ಶ್ರೀರಾಮುಲು ಬಿಎಸ್ ಆರ್ ಪಕ್ಷ ಕಟ್ಟಿದಾಗ ಬಿಜೆಪಿ ಬಿಡದೆ ಪಕ್ಷ ನಿಷ್ಟೆ ತೋರಿದರೆ, ರೆಡ್ಡಿ ಸಹೋದರರು ಶ್ರೀರಾಮುಲು ಪರ ನಿಂತಿದ್ದರು.

ಇನ್ನು ಕಳೆದ ವರುಷದ ಜರುಗಿದ ಜನಾರ್ದನ ರೆಡ್ಡಿ ಮಗಳ ಮದುವೆಗೂ ದೊಡ್ಡಪ್ಪನಾಗಿ ಕರುಣಾಕರ ರೆಡ್ಡಿ ಭಾಗವಹಿಸಲಿಲ್ಲ. ಇಷ್ಟೆಲ್ಲ ಜರುಗಿದರೂ ಬಿಜೆಪಿ ಪಕ್ಷನಿಷ್ಟರಾಗಿ ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದರು. ಆದರೂ ಬಿಜೆಪಿ ಎರಡನೇ ಪಟ್ಟಿಯಲ್ಲಿ ಸೋಮಶೇಖರ ರೆಡ್ಡಿ ಪ್ರಕಟವಾಯಿತೇ ವಿನಃ ಹಿರಿಯಣ್ಣ ಕರುಣಾಕರ ರೆಡ್ಡಿಗೆ ಟಿಕೆಟ್ ನೀಡದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಕರುಣಾಕರ ರೆಡ್ಡಿ ಈಗಲೂ ಕೊನೆ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿಯಾಗಿ ಟಿಕೆಟ್ ಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಟಿಕೆಟ್ ನೀಡಲು ಬಿಜೆಪಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಹೊಂದಿರುವ, ಸ್ಟಾರ್ ಕ್ಯಾಂಪೇನರ್ ಶ್ರೀರಾಮುಲು ಟಿಕೆಟ್ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಯಡಿಯೂರಪ್ಪ ಆಪ್ತ ವಲಯದಲ್ಲಿರುವ ಕೊಟ್ರೇಶ್ ಹರಪನಹಳ್ಳಿ ಕ್ಷೇತ್ರದಲ್ಲಿ ಕಳೆದ ಬಾರಿ ಕೆಜಿಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರು. ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಮನಸಿದ್ದಂತಿದೆ. ಇದಕ್ಕೆ ಶೋಭಾ ಕರಂದ್ಲಾಜೆ ಸಹ ಒಲವು ತೋರಿಸಿದ್ದಾರೆ. ಆದರೆ ರೆಡ್ಡಿ ಪರ ಬಿಜೆಪಿ ಪ್ರಭಾವಿ ನಾಯಕರು ಬ್ಯಾಟಂಗ್ ಮಾಡದ ಹಿನ್ನೆಲೆ ಟಿಕೆಟ್ ಸಿಗುವುದು ಕಷ್ಟವಾಗುತ್ತಿದೆ. ಇಷ್ಟೆಲ್ಲ ರಾಜಕೀಯ ವಿದ್ಯಮಾನಗಳು ಜರುಗಿದರೂ ಮೂರನೇ ಬಿಜೆಪಿ ಪಟ್ಟಿಯಲ್ಲಿ ತನ್ನ ಹೆಸರಿಗಾಗಿ ಕರುಣಾಕರ ರೆಡ್ಡಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಒಂದು ವೇಳೆ ಬಿಜೆಪಿ ಟಿಕೆಟ್ ನೀಡದೇ ಹೋದರೆ ಬಂಡಾಯ ಅಭ್ಯರ್ಥಿಯಾಗಿ ರೆಡ್ಡಿ ಕುಟುಂಬದ ಹಿರಿಯಣ್ಣ ಕರುಣಾಕರ ರೆಡ್ಡಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸ್ಪರ್ಧೇತರನಾಗಿ ಸ್ಪರ್ಧಿಸುವಂತೆ ರೆಡ್ಡಿ ಬೆಂಬಲಿಗರು, ಅಭಿಮಾನಿಗಳು ಈಗಾಗಲೇ ಒತ್ತಾಯಿಸುತ್ತಿದ್ದಾರೆ. ಕಳೆದೊಂದು ವರುಷದಿಂದ ಕ್ಷೇತ್ರದಲ್ಲಿಯೇ ಇದ್ದು ಪಕ್ಷ ಸಂಘಟನೆಯಲ್ಲಿ ರೆಡ್ಡಿ ತೊಡಗಿದ್ದರು. ಎದುರಾಳಿ ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರುವುದು ರೆಡ್ಡಿ ಕಷ್ಟವಾಗಬಹುದು.

ಮಾಹಿತಿ ನ್ಯೂಸ್ 18 ಕನ್ನಡ

Leave a Reply

Your email address will not be published. Required fields are marked *