ಕರ್ನಾಟಕ ವಿಧಾನಸಭಾ ಚುನಾವಣೆ: ಮತದಾನದ ಅವಧಿ 1 ಗಂಟೆ ಹೆಚ್ಚಳ!
ನ್ಯೂಸ್ ಕನ್ನಡ ವರದಿ(20-04-2018): ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯ ಅವಧಿಯನ್ನು 1 ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ.
ಸಾರ್ವಜನಿಕರಿಂದ ಬೇಸಿಗೆ ಇರುವ ಕಾರಣ ಮತದಾನ ದಿನದ ಸಮಯವನ್ನು ಹೆಚ್ಚಿಸುವಂತೆ ಅಹವಾಲುಗಳು ಬಂದಿದ್ದವು. ಇದಕ್ಕೆ ಸ್ಪಂದಿಸಿರುವ ಚುನಾವಣಾ ಆಯೋಗವು ಈ ಹಿಂದೆ ನಿಗದಿಪಡಿಸಲಾಗಿದ್ದ ಸಂಜೆ 5-00 ಗಂಟೆವರೆಗಿನ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಸಂಜೆ 6-00 ರವರೆಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಶೇಕಡವಾರು ಮತದಾನವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರು ನೀಡಿರುವ ಸಂದೇಶದ ಕಿರುಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.