ಎನ್ ಕೌಂಟರ್ ಗೂ ಮುಂಚೆ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದ ಕಾಶ್ಮೀರಿ ಉಗ್ರ ಹೇಳಿದ್ದೇನು?
ನ್ಯೂಸ್ ಕನ್ನಡ ವರದಿ-(07.04.18): ಕಾಶ್ಮೀರದ ಶೋಪಿಯಾನ್ ನಲ್ಲಿ ಉಗ್ರರ ಮತ್ತು ಭಾರತೀಯ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿತ್ತು. ಈ ಎನ್ ಕೌಂಟರ್ ಗೂ ಮುಂಚೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರನೋರ್ವ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದ ಆಡಿಯೋವೊಂದು ಇದೀಗ ಕಾಶ್ಮೀರದಾದ್ಯಂತ ವೈರಲ್ ಆಗಿದೆ. ಎನ್ ಕೌಂಟರ್ ಮಾಡುವ ಸ್ವಲ್ಪವೇ ಹೊತ್ತಿನ ಮುಂಚೆ ಈತ ಮನೆಗೆ ಕರೆ ಮಾಡಿದ್ದು, ಎಲ್ಲರೊಂದಿಗೂ ಕ್ಷಮೆಯಾಚಿಸಿದ್ದಾನೆ ಎಂದು ತಿಳಿದು ಬಂದಿದೆ.
ಏತಮಾದ್ ಹುಸೈನ್ ದರ್(28) ಎಂಬ ಈ ಯುವಕ ಅನಕ್ಷರಸ್ಥನೇನಲ್ಲ. ಎಂಫಿಲ್ ಪದವಿಯನ್ನು ಮುಗಿಸಿದ್ದ ಈತ ಜ್ಯೂನಿಯರ್ ರಿಸರ್ಚ್ ಫೆಲೋ ಕೂಡಾ ಆಗಿದ್ದ. ಎನ್ ಕೌಂಟರ್ ಗೆ ಒಳಗಾಗುವ ಕೆಲ ಸಮಯದ ಮುಂಚೆ ತಂದೆಗೆ ಕಾಲ್ ಮಾಡಿ, ನನ್ನನ್ನು ಕ್ಷಮಿಸಿ, ನನಗೆ ನಿಮ್ಮ ಯಾವುದೇ ಆಗ್ರಹಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನಿನ್ನು ಕೆಲವೇ ಹೊತ್ತಿನಲ್ಲಿ ಎನ್ ಕೌಂಟರ್ ಗೊಳಗಾಗುವ ಸಾಧ್ಯತೆ ಇದೆ. ಈಗಾಗಲೇ ನನ್ನ ಸ್ನೇಹಿತನ ಹಣೆಗೆ ಗುಂಡಿಕ್ಕಲಾಗಿದೆ. ಆತನ ತಂದೆಯೊಂದಿಗೆ ಕಾಲ್ ಮಾಡಿ ಮಾತನಾಡಬೇಕು ಎಂದು ಆತ ಹೇಳುತ್ತಿದ್ದಾನೆ”
ಈ ವೇಳೆ ಆತನ ತಂದೆಯು, ” ನಿನಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದಾದರೂ ದಾರಿಯಿದೆಯೇ? ಇದ್ದರೆ ಬಂದು ಬಿಡು ಎಂದಾಗ, ” ಇನ್ನು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳು ಉಳಿದಿಲ್ಲ. ನಾವು ತುಂಬಾನೇ ಪ್ರಯತ್ನಪಟ್ಟೆವು. ಎಲ್ಲರೂ ನನ್ನನ್ನು ದಯವಿಟ್ಟು ಕ್ಷಮಿಸಿ. ನಿಮಗೋಸ್ಕರ ನಾನು ನನ್ನನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿ ಅಳುತ್ತಿದ್ದು, ಬಳಿಕ ಎನ್ ಕೌಂಟರ್ ಮಾಡಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.