ಅನ್ಯಾಯಕ್ಕೊಳಗಾದವರಿಗೆ ಸ್ವಂತ ಹಣದಿಂದ ಕಾನೂನು ಹೋರಾಟ ನಡೆಸುತ್ತಿರುವ ಈ ದಿಟ್ಟ ಮಹಿಳೆಯ ಕುರಿತು ನೀವು ತಿಳಿದುಕೊಳ್ಳಲೇ ಬೇಕು!

ಹೆಸರು ದೀಪಿಕಾ ಎಸ್ ರಾಜವತ್., 38ರ ಹರೆಯದ ಈ ದಿಟ್ಟೆ ಮಹಿಳೆ ವಕೀಲೆಯಾಗಿ ವೃತ್ತಿಯನ್ನು ಮಾಡಿಕೊಂಡು ಅನ್ಯಾಯಕ್ಕೊಳಗಾದ ಅಮಾಯಕರಿಗೆ ಕಾನೂನಿನ ಮೂಲಕ ತನ್ನಿಂದಾಗುವ ಸಹಾಯವನ್ನು ಮಾಡುವ ಮನಸ್ಥಿಯನ್ನು ಹೊಂದಿರುವವರು. ತನ್ನ ವೃತ್ತಿಯೊಂದಿಗೆ ಹೋರಾಟಗಾರ್ತಿಯಾಗಿ, ವಾಯ್ಸ್ ಆಫ್ ರೈಟ್ಸ್ ಎಂಬ ಸರಕಾರೇತರ ಮಾನವ ಹಕ್ಕುಗಳ ಸಂರಕ್ಷಣೆಗಾಗಿರುವ ಸಂಘಟನೆಯ ಮುಖ್ಯಸ್ಥೆಯಾಗಿರುವ ದೀಪಿಕಾ ರಾಜವತ್, 5 ವರ್ಷದ ಮಗುವಿನ ತಾಯಿ. ಇವರ ಪತಿ ಮಾಜಿ ಸೈನಿಕ ಪ್ರಸ್ತುತ ಬಹರೈನ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ.

ಜಮ್ಮುವಿನ ಕಥುವಾದಲ್ಲಿ 8ರ ಹರೆಯದ ಕುದುರೆ ಕಾಯುತ್ತಿದ್ದ ಅಲೆಮಾರಿ ಸುನ್ನೀ ಬಖೇರ್ ವಾಲ ಸಮುದಾಯದ ಬಾಲಕಿಯ ಶವ ಕಾಡಿನಲ್ಲಿ ಪತ್ತೆಯಾಗಿದ್ದ ವಿಷಯವನ್ನು ಪತ್ರಿಕೆಯಲ್ಲಿ ಓದಿದ ದೀಪಿಕಾ ಈ ಬಾಲಕಿಯ ಸಾವಿನ ಹಿಂದೆ ಏನೋ ಕುತಂತ್ರ ಅಡಗಿದೆ ಎಂಬ ಸಂಶಯದಿಂದ ಬಾಲಕಿಯ ಕುಟುಂಬವನ್ನು ಸಂಪರ್ಕಿಸಲು ನಿರ್ಧರಿಸಿದರು. ಅಪ್ರಾಪ್ತ ಪುಟ್ಟ ಬಾಲಕಿಯ ಮೇಲಿನ ಕಾಮುಕರ ಮೃಗೀಯ ವರ್ತನೆಗೆ ತಕ್ಕ ಪಾಠ ಕಲಿಸಬೇಕೆಂದು ಮನಸ್ಸಿನಲ್ಲಿ ದೃಢ ನಿರ್ಧಾರ ತಳೆದ ವಕೀಲೆ ದೀಪಿಕಾ ರಾಜವತ್ ಸಂತ್ರಸ್ತೆ ಆಸಿಫಾ ಕುಟುಂಬವನ್ನು ಸಂಪರ್ಕಿಸಿ ಆ ಕುಟುಂಬಕ್ಕೆ ತನ್ನಿಂದಾಗುವ ಸಹಾಯ ಮಾಡಬೇಕೆಂಬ ನಿರ್ಧಾರ ಮಾಡಿದರು. ಅದರಂತೆ ಕಳೆದ ಫೆಬ್ರವರಿಯಲ್ಲಿ ಆಸಿಫಾ ತಂದೆ ಮುಹಮ್ಮದ್ ಅಖ್ತರ್ ಅವರನ್ನು ಕಂಡು ಮಾತನಾಡಿದ ದೀಪಿಕಾ ರಾಜಾವತ್, ಈ ಸಾವಿನ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡಲು ತಾನು ಇಚ್ಚಿಸುವುದಾಗಿಯೂ ಅದಕ್ಕಾಗಿ ತನಗೆ ಸಂಪೂರ್ಣ ಸಹಕಾರ ನೀಡುವಂತೆ ಅವರನ್ನು ವಿನಂತಿಸಿಕೊಂಡರು. ದಿಟ್ಟ ಮಹಿಳಾ ವಕೀಲೆಯ ಮಾತಿನಿಂದ ಪ್ರಭಾವಿತರಾದ ಆಸಿಫಾಳ ಕುಟುಂಬವು ದೀಪಿಕಾಳ ವಿನಂತಿಗೆ ಸಮ್ಮತಿಸಿ ಕಾನೂನು ಹೋರಾಟಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿತು.

ಆಸಿಫಾ ಕುಟುಂಬದವರ ಸಮ್ಮತಿ ದೊರಕಿದ ನಂತರ ಪ್ರಪ್ರಥಮವಾಗಿ ದೀಪಿಕಾ ಹೈಕೋರ್ಟಿನಲ್ಲಿ ದೂರು ಸಲ್ಲಿಸಿ ಆಸಿಫಾಳ ಹತ್ಯೆ ಪ್ರಕರಣದ ತನಿಖೆಯನ್ನು ಸ್ಥಳೀಯ ಪೋಲೀಸರ ಕೈಯಿಂದ ಕ್ರೈಮ್ ಬ್ರಾಂಚಿಗೆ ವರ್ಗಾಯಿಸುವಂತೆ ಒತ್ತಾಯಿಸಿದರು. ದೀಪಿಕಾ ರಾಜಾವತ್ ಈ ಪ್ರಕರಣದ ಉಸ್ತುವಾರಿಯನ್ನು ವಹಿಸಿಕೊಂಡದ್ದೇ ತಡ, ತಕ್ಷಣ ಕಾಶ್ಮೀರದಾದ್ಯಂತ ಪ್ರತಿಭಟನೆಯ ಕಾವು ಏರತೊಡಗಿತು. ಆಸಿಫಾಳ ಸುನ್ನೀ ಮುಸ್ಲಿಮ್ ಬಖೇರ್ ವಾಲ ಸಮುದಾಯವು ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸುವಂತೆ ಅಲ್ಲಲ್ಲಿ ಬಂದ್ ಪ್ರತಿಭಟನೆಗಳನ್ನು ನಡೆಸತೊಡಗಿತು. ಅದರ ಜೊತೆಗೆ ಹುರಿಯತ್ ಕಾನ್ಫರೆನ್ಸ್ ಹಾಗೂ ಜಮ್ಮು ಕಾಶ್ಮೀರ ಪ್ಯಾಂಥರ್ಸ್ ಪಾರ್ಟಿ ಕೂಡ ಕೈಜೋಡಿಸಿತು. ಪ್ರತಿಭಟನೆಗಳು ಮುಗಿಲು ಮುಟ್ಟಿದಾಗ ಹೈಕೋರ್ಟಿನ ಆದೇಶದಂತೆ ಜಮ್ಮು ಕಾಶ್ಮೀರ ಸರಕಾರವು ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿತು. ಸುಮಾರು ಒಂದು ತಿಂಗಳು ಪ್ರಕರಣದ ತನಿಖೆ ನಡೆಸಿದ ಅಪರಾಧ ವಿಭಾಗವು ನೀಡಿದ ವರದಿ ಮಾತ್ರ ಇಡೀ ದೇಶವನ್ನೇ ದಂಗಾಗಿಸಿತ್ತು.

ತನ್ನ ಮನೆಯ ಹಿಂದಿನ ಕಾಡಿನಲ್ಲಿ ಕುದುರೆ ಮೇಯಿಸುತ್ತಿದ್ದ ಆಸಿಫಾಳನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ದೂರದ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿದ್ದಾರೆ. ಆಕೆಗೆ ಮತ್ತು ಬರಿಸುವ ನಿದ್ರಾಗುಳಿಗೆಗಳನ್ನು ನೀಡಿ ಸತತ ಮೂರು ದಿನಗಳ ಕಾಲ ದೇವಸ್ಥಾನದ ಒಳಗಡೆಯೇ ಆಕೆಯ ಮೇಲೆ ಮೃಗೀಯವಾಗಿ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳ ಪೈಕಿ ಓರ್ವನನ್ನು ಕೇವಲ ಬಾಲಕಿಯನ್ನು ಆತ್ಯಾಚಾರ ಮಾಡಲೋಸ್ಕರ ದೂರದ ಮೀರತ್ ನಿಂದ ಫೋನ್ ಮಾಡಿ ಕರೆಸಲಾಗುತ್ತದೆ. ಪುಟ್ಟ ಬಾಲಕಿಯನ್ನು ಮನೋ ಇಚ್ಚೆ ಅತ್ಯಾಚಾರ ಮಾಡಿದ ದುರುಳರು ಅವಳನ್ನು ಕೊಂದು ಪಕ್ಕದ ಕಾಡಿನಲ್ಲಿ ಶವವನ್ನು ಎಸೆಯುತ್ತಾರೆ. ಬಾಲಕಿ ಸತ್ತಿದ್ದಾಳೆ ಎಂಬುವುದನ್ನು ಖಚಿತ ಪಡಿಸಲು ದೊಡ್ಡ ಕಲ್ಲನ್ನು ಎತ್ತಿ ಬಾಲಕಿಯ ತಲೆಯ ಮೇಲೆ ಹಾಕಿ ಆಕೆಯ ತಲೆಯನ್ನು ಜಜ್ಜಿ ಹಾಕುತ್ತಾರೆ.

ಅದಾಗಲೇ ಮಗಳು ಕಾಣೆಯಾದ ಕುರಿತು ಬಾಲಕಿಯ ತಂದೆ ಮುಹಮ್ಮದ್ ಅಖ್ತರ್ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಸ್ಥಳೀಯ ರಾಜಕೀಯ ನಾಯಕರ ಕೃಪಾಕಟಾಕ್ಷವನ್ನು ಹೊಂದಿದ್ದ ಆರೋಪಿಗಳು ಪೋಲೀಸರಿಗೆ ಒಂದೂವರೆ ಲಕ್ಷ ರೂಪಾಯಿ ಲಂಚ ನೀಡಿ ಪ್ರಕರಣವನ್ನು ಮುಚ್ಚಿ ಹಾಕುವಂತೆ ಪೋಲೀಸರ ಮೇಲೆ ಒತ್ತಡ ಹಾಕುತ್ತಾರೆ. ಆರೋಪಿಗಳ ಕೈಯಿಂದ ಲಂಚ ಸ್ವೀಕರಿಸಿದ ಪೋಲೀಸರು ತನಿಖೆಯ ಪ್ರಥಮ ಹಂತದಲ್ಲಿ ಸಹಜ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಳ್ಳುವ ಮೂಲಕ ಆರೋಪಿಗಳನ್ನು ರಕ್ಷಿಸುವ ಮೂಲಕ ತಮ್ಮ ಋಣವನ್ನು ತೀರಿಸುತ್ತಾರೆ. ಆದರೆ ಅಪರಾಧ ವಿಭಾಗದ ತನಿಖೆಯಿಂದ ಇವರ ಶಡ್ಯಂತ್ರ ಬಟ್ಟ ಬಯಲಾಗುವುದರೊಂದಿಗೆ ಆರೋಪಿಗಳೊಂದಿಗೆ ತಪ್ಪತಸ್ಥ ಪೋಲೀಸರು ಕೂಡ ಇದೀಗ ಜೈಲು ಪಾಲಾಗಿದ್ದಾರೆ.

ನಮ್ಮ ದೇಶದಲ್ಲಿರುವ ಕಾನೂನು ಕುರುಡು ಕಾಂಚಾಣದ ಹಿಂದೆ ನಲಿದಾಡುತ್ತಿರುವ ಈ ಸಮಯದಲ್ಲಿ ಹಣದ ಆಸೆ ತೊರೆದು ಕೇವಲ ನ್ಯಾಯಕ್ಕಾಗಿ ಪಣತೊಟ್ಟು ಅಖಾಡಕ್ಕೆ ಇಳಿಯುವ ದೀಪಿಕಾ ರಾಜವತ್ ರಂತಹ ವಕೀಲರು ಕಾಣಲು ಸಿಗುವುದೇ ಬಹಳ ಅಪರೂಪ. ಒಂದು ವೇಳೆ ದೀಪಿಕಾ ರಾಜವತ್ ಮುತುವರ್ಜಿ ವಹಿಸದಿದ್ದಲ್ಲಿ ಅಸಿಫಾಳ ಹತ್ಯೆಯೂ ಕೂಡ ಹತ್ತರೊಂದಿಗೆ ಹನ್ನೊಂದು ಎಂಬಂತಾಗುತ್ತಿತ್ತೋ ಏನೋ?.
ಕಾನೂನಿನ ಅರಿವಿಲ್ಲದ ಆರ್ಥಿಕವಾಗಿ ಹಿಂದುಳಿದ ಬಡವರ ಜೀವಗಳಿಗೆ ಬೆಲೆ ಇಲ್ಲದ ಈ ಕಾಲದಲ್ಲಿ ದೀಪಿಕಾ ರಾಜಾವತ್ ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಪ್ರಸಂಶಾರ್ಹವಾಗಿದೆ. ದಿನನಿತ್ಯ ತನಗೆ ನೂರಾರು ಬೆದರಿಕೆ ಕರೆಗಳು ಬಂದರು ಅದನ್ನು ಸವಾಲಾಗಿ ಸ್ವೀಕರಿಸಿ ಆಸಿಫಾಳ ಸಾವಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ತನ್ನ ಪ್ರಾಣದ ಹಂಗನ್ನು ತೊರೆದು ಅಹರ್ನಿಶಿ ದುಡಿಯುತ್ತಿರುವ ದೀಮಂತ ಮಹಿಳೆ ದೀಪಿಕಾ ರಾಜಾವತ್ ಅವರಿಗೆ ನನ್ನದೊಂದು ಬಿಗ್ ಸೆಲ್ಯೂಟ್..!!

Leave a Reply

Your email address will not be published. Required fields are marked *