ಕಾಪು ಕ್ಷೇತ್ರದಲ್ಲಿ ಸೊರಕೆಯವರ ಅಭಿವೃದ್ಧಿಯೇ ನಮಗೆ ಶ್ರೀರಕ್ಷೆ: ಡಾ. ದೇವಿಪ್ರಸಾದ್ ಶೆಟ್ಟಿ

ನ್ಯೂಸ್ ಕನ್ನಡ ವರದಿ-(20.04.18): ಕಾಪು: ಕಾಪು ಕ್ಷೇತ್ರದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾದ ಶ್ರೀ ವಿನಯಕುಮಾರ ಸೊರಕೆಯವರ ನಡವಳಿ, ಕಾರ್ಯದಕ್ಷತೆ ಹಾಗೂ ಕ್ಷೇತ್ರದಾದ್ಯಂತ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಯೋಜನೆಗಳು ಮತದಾರರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಕಾಪುಕ್ಷೇತ್ರದಲ್ಲಿ ಅವರ ಗೆಲುವು ಖಚಿತವೆಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಉಚ್ಚಿಲದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಚುನಾವಣಾ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದರು. ಕಳೆದ 5 ವರ್ಷ ಹಾಗೂ ಹಿಂದಿನ ದಶಕಗಳ ಆಡಳಿತವನ್ನು ತುಲನೆ ಮಾಡಿದಾಗ ಸೊರಕೆಯವರ ಅಭಿವೃದ್ಧಿಯ ಚಿಂತನೆ, ದೂರದೃಷ್ಟಿತ್ವ ಯುವಜನಾಂಗಕ್ಕೆ ಅವರ ಕೊಡುಗೆ, ಬಡವ-ಶೋಷಿತ ವರ್ಗದವರ ಬಗ್ಗೆ ಅವರಿಗಿರುವ ಕಾಳಜಿ, ಕ್ಷೇತ್ರದ ಮತದಾರರ ಸಮಸ್ಯೆಗೆ ಸ್ಪಂದಿಸುವ ಪರಿ, ಒಬ್ಬ ಆದರ್ಶ ಪ್ರತಿನಿಧಿಯಾಗಿ ಜನರ ಬಳಿ ತೆರಳಿ ಅವರ ಸೇವೆ ಮಾಡಿರುವ ಸೊರಕೆಯವರಿಗೆ ಸರಿ ಸಾಟಿ ಇರುವ ಅಭ್ಯರ್ಥಿ ಇನ್ನೊಬ್ಬರಿಲ್ಲವೆಂದು ಶೆಟ್ಟಿ ತಿಳಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ 1,760 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಂಡಿವೆ. ಗ್ರಾಮೀಣ ರಸ್ತೆಗಳ ಕಾಂಕ್ರೀಟೀಕರಣ, ಸಂಪರ್ಕ ರಸ್ತೆಗಳು ಸರ್ವ ಋತು ರಸ್ತೆಗಳ ನಿರ್ಮಾಣ, ಕ್ಷೇತ್ರದಾದ್ಯಂತ ಕೆರೆಗಳ ಅಭಿವೃದ್ಧಿ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ನಿವೇಶನ ರಹಿತರಿಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ನಿವೇಶನ ನೀಡಿರುವ ಕ್ಷೇತ್ರ, ಕುಡಿಯುವ ನೀರಿಗಾಗಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಕಸ ಮುಕ್ತ ಕ್ಷೇತ್ರಕ್ಕಾಗಿ ಕಸ ವಿಲೇವಾರಿ ಘಟಕ, ಶಿಕ್ಷಣ-ಕೈಗಾರಿಕೆ-ಪ್ರವಾಸೋದ್ಯಮದಲ್ಲಿ ಅದ್ಭುತ ಸಾಧನೆ, ಕಾಪುವನ್ನು ತಾಲೂಕು ಎಂದು ಘೋಷಿಸಿ ಐತಿಹಾಸಿಕ ದಾಖಲೆ, ಕಾಪು ಪುರಸಭೆಯನ್ನಾಗಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿರುವ ಕ್ರಾಂತಿಕಾರಿ ಅಭಿವೃದ್ಧಿ ರೂವಾರಿ ವಿನಯಕುಮಾರ ಸೊರಕೆಯವರನ್ನು ಕ್ಷೇತ್ರದ ಮತದಾರರು ಸ್ವಾಭಿಮಾನದಿಂದ ಅವರಿಗೆ ಮತ ಚಲಾಯಿಸಿ ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *