4 ತಿಂಗಳ ಬಾಲೆಯನ್ನು ರೇಪ್ ಮಾಡಿ ಬರ್ಬರ ಕೊಲೆ, ಮೃತದೇಹ ನೋಡಿ ಕಣ್ಣೀರಿಟ್ಟ ಪೊಲೀಸರು!

ನ್ಯೂಸ್ ಕನ್ನಡ ವರದಿ: ನಾಗರಿಕ ಸಮಾಜ ತಲೆತಗ್ಗಿಸುವಂಥ ಮತ್ತೊಂದು ಅತ್ಯಂತ ಹೇಯ ಘಟನೆ ಮಧ್ಯಪ್ರದೇಶದ ಇಂದೋರ್‍ನ ರಾಜವಾಡ ಪ್ರದೇಶದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಸುಳೆ ಮೇಲೆ ಕ್ರೂರ ಕಾಮುಕನೊಬ್ಬ ಅತ್ಯಾಚಾರ ಎಸಗಿ ಕಗ್ಗೊಲೆ ಮಾಡಿರುವ ಬರ್ಬರ ಕೃತ್ಯ ವರದಿಯಾಗಿದೆ.

ಗುರುವಾರ ಮುಂಜಾನೆ ಇಂದೋರ್‍ನ ಪಾರಂಪರಿಕ ಶಿವ ವಿಲಾಸ್ ಪ್ಯಾಲೇಸ್‍ನ ನೆಲ ಮಾಳಿಗೆ ಪ್ರದೇಶದಲ್ಲಿ ಅತ್ಯಾಚಾರದಿಂದ ಹತ್ಯೆಗೀಡಾದ ಶಿಶುವಿನ ಮೃತದೇಹ ಪತ್ತೆಯಾಗಿದೆ. ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳಿರುವುದು ಹೇಯ ಕೃತ್ಯದ ಭೀಕರತೆಗೆ ಸಾಕ್ಷಿಯಾಗಿದೆ. ಪ್ರಾಥಮಿಕ ತನಿಖೆ ನಡೆಸುವಾಗ ಕಠಿಣ ಹೃದಯಿ ಪೊಲೀಸರ ಕಣ್ಣುಗಳೇ ಒದ್ದೆಯಾಗುವಷ್ಟರ ಮಟ್ಟಿಗೆ ಈ ಘೋರ ಕೃತ್ಯ ನಡೆದಿದೆ. ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲಿಸಿದ ಉನ್ನತ ಪೊಲೀಸ್ ಅಧಿಕಾರಿಗಳೇ ಘಟನೆಯಿಂದ ವಿಚಲಿತರಾಗಿದ್ದಾರೆ.

ಕತುವಾ, ಸೂರತ್, ಉತ್ತರಪ್ರದೇಶ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿ ಪುಟ್ಟ ಮಕ್ಕಳ ಮೇಲೆ ಕಾಮುಕರು ಲೈಂಗಿಕ ದಾಳಿ ನಡೆಸಿ ಕಗ್ಗೊಲೆ ಮಾಡಿರುವ ಸರಣಿ ನಿರ್ದಯ ಕೃತ್ಯಗಳ ಬಗ್ಗೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಾಗಲೇ 4 ತಿಂಗಳ ಕಂದಮ್ಮ ಕಾಮುಕರ ಕ್ರೌರ್ಯಕ್ಕೆ ಬಲಿಯಾಗಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಬರ್ಬರ ಕೃತ್ಯ ಎಸಗಿರುವ ಶಂಕೆ ಮೇಲೆ ಕುಟುಂಬದ ಸದಸ್ಯನೊಬ್ಬನನ್ನು ಬಂಧಿಸಿ ತೀವ್ರ ತನಿಖೆಗೆ ಒಳಪಡಿಸಲಾಗಿದೆ.

ಶಿಶುವಿನ ಮರಣೋತ್ತರ ಪರೀಕ್ಷೆಯಿಂದ ಹಸುಳೆ ಮೇಲೆ ಲೈಂಗಿಕ ದಾಳಿ ನಡೆದಿರುವುದು ಹಾಗೂ ಮಗುವಿನ ತಲೆಗೆ ತೀವ್ರ ಪೆಟ್ಟು ಬಿದ್ದು, ಮೃತಪಟ್ಟಿರುವುದು ದೃಢಪಟ್ಟಿದೆ. ಕರ್ತವ್ಯಲೋಪ ಆರೋಪದ ಮೇಲೆ ಸರಫಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ತ್ರಿಲೋಕ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ನೀಚ ಕೃತ್ಯ ನಡೆದ ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಸಿಂಗ್ ವಿಫಲರಾದ ಕಾರಣಕ್ಕಾಗಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಡಿಜಿಐ ಹರಿನಾರಾಯಣಚಾರಿ ಮಿಶ್ರಾ ತಿಳಿಸಿದ್ದಾರೆ.

ಕೃತ್ಯ ನಡೆದ ರಾಜವಾಡ ಪ್ರದೇಶವು ಇಂದೋರ್‍ನ ಸಾಂಸ್ಕøತಿಕ ಮತ್ತು ವಾಣಿಜ್ಯ ಕೇಂದ್ರ. ಈ ಬಾಲಕಿಯ ತಂದೆ ಪ್ರವಾಸಿಗರಿಗೆ ಬಲೂನ್‍ಗಳನ್ನು ಮಾರುವ ಬೀದಿ ವ್ಯಾಪಾರಿ. ಕತುವಾದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆಯಾದ 8 ವರ್ಷದ ಬಾಲಕಿಯಂತೆ ಈ ಶಿಶುವಿನ ಕುಟುಂಬದವರು ಅಲೆಮಾರಿ ಬುಡಕಟ್ಟು ಸಮುದಾಯದವರು. ರಾಜವಾಡದ ಗುಡಿಸಲಿನಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿಶು ಮಲಗಿದ್ದಾಗ ಅಪಹರಿಸಲಾಗಿದೆ. ಪೊಲೀಸರ ಕಾವಲು ಇರುವ ಶಿವ ವಿಲಾಸ್ ಪ್ಯಾಲೇಸ್‍ನ ನೆಲಮಾಳಿಗೆಯಲ್ಲೇ ಈ ಕೃತ್ಯ ನಡೆದಿದೆ.

ಮುಂಜಾನೆ 4.45ರಲ್ಲಿ ವ್ಯಕ್ತಿಯೊಬ್ಬ ಸೈಕಲ್ ಮೇಲೆ ಬಂದು ಮಗುವನ್ನು ಎತ್ತಿಕೊಂಡು ಶಿವ ವಿಲಾಸ್ ಪ್ಯಾಲೇಸ್‍ನ ವಾಣಿಜ್ಯ ಸಂರ್ಕಿಣದತ್ತ ಚಲಿಸಿದ ದೃಶ್ಯ ಹಾಗೂ ಕೆಲ ಸಮಯದ ಬಳಿಕ ಒಬ್ಬನೇ ಆ ಸ್ಥಳದಿಂದ ಹಿಂದಿರುಗಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯ ಸುಳಿವು ಲಭಿಸಿ ಆತನನ್ನು ಬಂಧಿಸಿ ರಕ್ತಸಿಕ್ತ ಬಟ್ಟೆಗಳು ಮತ್ತು ಸೈಕಲ್‍ನನ್ನು ವಶಪಡಿಸಿಕೊಂಡರು. ಬಂಧಿತ ಆರೋಪಿ ಹಸುಳೆ ಕುಟುಂಬದ ಪರಿಚಿತ. ಪೊಲೀಸರು ತೀರಾ ಸಮೀಪದಲ್ಲೇ ಇದ್ದರೂ ಕೃತ್ಯದ ಸುಳಿವು ಲಭಿಸಲಿಲ್ಲ.  ತಾನು 3ರ ನಸುಕಿನಲ್ಲಿ ಎದ್ದಾಗ ನನ್ನ ಎಲ್ಲ ಮಕ್ಕಳು ಮಲಗಿದ್ದರು. ನನಗೆ ಮುಂಜಾನೆ 5.30ರಲ್ಲಿ ಎಚ್ಚರವಾದಾಗ ನನ್ನ 4 ತಿಂಗಳ ಮಗು ಇರಲಿಲ್ಲ ಎಂದು ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.  ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *