ಪ್ರಧಾನಿ ಮೋದಿ ವಿದೇಶಗಳಲ್ಲಿ ವಾಚಾಳಿ, ಭಾರತದಲ್ಲಿ ಮಾತ್ರ ಮೌನಿಯಾಗಿರುತ್ತಾರೆ: ಶಿವಸೇನೆ ವ್ಯಂಗ್ಯ
ನ್ಯೂಸ್ ಕನ್ನಡ ವರದಿ-(21.04.18): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಕುರಿತಾದಂತೆ ಶಿವಸೇನೆಯು ಹಿಂದಿನಿಂದಲೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೀಗ ಶಿವಸೇನೆಯ ಮುಖವಾಣಿಯಾಗಿರುವ ಸಾಮ್ನಾದಲ್ಲಿ ಪ್ರಧಾನಿ ಮೋದಿ ಕುರಿತಾದಂತೆ ವ್ಯಂಗ್ಯವಾಡಿರುವ ಶಿವಸೇನೆ, ನರೇಂದ್ರ ಮೋದಿಯು ವಿದೇಶಕ್ಕೆ ಹೋದಾಗ ಹೆಚ್ಚು ಮಾತನಾಡುತ್ತಾರೆ, ಆದರೆ ಭಾರತಕ್ಕೆ ಬಂದರೆ ಏನೂ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದೆ.
ಸಹಸ್ರಾರು ಕೋಟಿ ಬ್ಯಾಂಕ್ ಸಾಲವನ್ನು ಸುಸ್ತಿ ಮಾಡಿ ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್ನಲ್ಲಿ ಆಸರೆ ಪಡೆದಿರುವ ಹೊರತಾಗಿಯೂ ಅಲ್ಲಿ ಚೆನ್ನಾಗಿ ಭಾಷಣ ಬಿಗಿದಿರುವ ಮೋದಿ ಅವರು ಅಲ್ಲಿಂದ ಈಗಿನ್ನು ಬರಿಗೈಯಲ್ಲಿ ಮರಳಲಿದ್ದಾರೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.
ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಬಗ್ಗೆ ತೀವ್ರವಾದ ಅಸಮಾಧಾನ ಇರಬಹುದು; ಆದರೆ ಅವರು ವಿದೇಶೀ ನೆಲದಲ್ಲಿ ಭಾರತದ ಆಂತರಿಕ ವಿಷಯಗಳನ್ನು ಮಾತನಾಡುವುದು ಸರಿಯಲ್ಲ; ಹಾಗೆ ಮಾಡುವುದು ಅವರ ಹುದ್ದೆಯ ಘನತೆಗೂ ತಕ್ಕುದಾದುದಲ್ಲ ಎಂದು ಹೇಳಿದೆ.