ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಪ್ರಾಯಶ್ಚಿತ್ತವಾಗಿ ಕೇಶಮುಂಡನ ಮಾಡಿಕೊಂಡ ಶಾಸಕ; ಬಿಜೆಪಿ ತೊರೆಯಲು ನಿರ್ಧಾರ

ಗುವಾಹಟಿ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ‘ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ’ ತ್ರಿಪುರ ರಾಜ್ಯದ ಸುರ್ಮಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆಶಿಶ್ ದಾಸ್ ಅವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಜತೆಗೆ ಕೋಲ್ಕತಾದ ಪ್ರಸಿದ್ಧ ಕಾಳಿಘಾಟ್ ದೇವಸ್ಥಾನದಲ್ಲಿ ಯಜ್ಞ ನಡೆಸಿದ್ದಾರೆ.

ತ್ರಿಪುರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಜಕೀಯ ಅರಾಜಕತೆ ಮತ್ತು ಗದ್ದಲವನ್ನು ಉಂಟುಮಾಡುತ್ತಿದೆ. ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಜನರು ಅಸಂತುಷ್ಟರಾಗಿದ್ದಾರೆ. ಹೀಗಾಗಿ ತಾವು ಪಕ್ಷವನ್ನು ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ್ದು, ಕೋಲ್ಕತಾದ ಪ್ರಸಿದ್ಧ ಕಾಳಿಘಾಟ್ ದೇವಸ್ಥಾನದಲ್ಲಿ ಯಜ್ಞ ನಡೆಸಿದ್ದಾರೆ.

ಸ್ವಪಕ್ಷೀಯರ ವಿರುದ್ಧವೇ ಸತತ ವಾಗ್ದಾಳಿ ನಡೆಸುತ್ತಿರುವ ಆಶಿಶ್ ದಾಸ್, ಕಳೆದ ಎರಡು ವರ್ಷಗಳಿಂದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿದ್ದರು. ಜತೆಗೆ ಪ್ರಧಾನಿ ಹುದ್ದೆಗೆ ಮಮತಾ ಬ್ಯಾನರ್ಜಿ ಸೂಕ್ತ ವ್ಯಕ್ತಿ ಹೇಳಿದ್ದರು.

ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಪ್ರಾಯಶ್ಚಿತ್ತವಾಗಿ ನಾನು ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಪಕ್ಷವನ್ನು ತ್ಯಜಿಸಲು ಮತ್ತು ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದ್ದೇನೆ. ತ್ರಿಪುರ ಕಂಡ ಬಿಜೆಪಿ ನೇತೃತ್ವದ ಸರ್ಕಾರದ ಅರಾಜಕತೆ ಹಾಗೂ ದುರಾಡಳಿತವು ನನಗೆ ನೋವನ್ನುಂಟುಮಾಡಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ನಾನು ಅವರ ಎಲ್ಲ ತಪ್ಪುಗಳನ್ನು ಟೀಕಿಸುತ್ತಾ ಬಂದಿದ್ದೇನೆ ಮತ್ತು ಪಕ್ಷ ಹಾಗೂ ರಾಜಕೀಯದಾಚೆ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ದಾಸ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಮೂಲಗಳು ಹೇಳಿವೆ. ತ್ರಿಪುರ ಸರ್ಕಾರದ ವಿರುದ್ಧ ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಅವರ ಸಂದೇಶವು ದೇಶದ ಎಲ್ಲ ವರ್ಗಗಳ ಜನರ ಮನಸ್ಸನ್ನು ಮುಟ್ಟಿತ್ತು. ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಒಮ್ಮೆ ಮೋದಿ ಹೇಳಿದ್ದರು. ಆದರೆ ಅದೀಗ ದೇಶದ ಅತಿ ಜನಪ್ರಿಯ ಸುಳ್ಳಾಗಿದೆ. ಮೋದಿ ಅವರು ಸರ್ಕಾರದ ಆಸ್ತಿಗಳನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಭವಾನಿಪುರ ಉಪ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಗಳಿಸಿದ ಮಮತಾ ಬ್ಯಾನರ್ಜಿ ಅವರನ್ನು ದಾಸ್ ಕೊಂಡಾಡಿದ್ದರು. ಅನೇಕ ಜನರು ಮತ್ತು ಸಂಘಟನೆಗಳು, ಮಮತಾ ಅವರು ಬಂಗಾಳಕ್ಕೆ ಎಷ್ಟು ಮುಖ್ಯವೋ ದೇಶಕ್ಕೂ ಅಷ್ಟೇ ಮುಖ್ಯ ಎಂದು ಭಾವಿಸಿರುವುದರಿಂದ ಅವರನ್ನು ಉನ್ನತ ಹುದ್ದೆಯಲ್ಲಿ ನೋಡಲು ಬಯಸಿದ್ದಾರೆ ಎಂದಿದ್ದರು.

Leave a Reply

Your email address will not be published. Required fields are marked *