ಬಿಜೆಪಿಯ 80 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಘೋಷಣೆ; ವರುಣ್ ಗಾಂಧಿಯನ್ನು ಕೈಬಿಟ್ಟ ಬಿಜೆಪಿ

ದೆಹಲಿ: ಬಿಜೆಪಿ ಗುರುವಾರ 80 ಸದಸ್ಯರೊಂದಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ(National Executive )ಸಮಿತಿಯನ್ನು ರಚಿಸಿದ್ದು ಇಬ್ಬರು ಪ್ರಮುಖ ನಾಯಕರನ್ನು ಕೈಬಿಟ್ಟಿದೆ. ಈ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಸಂಸದ ವರುಣ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರನ್ನು ಕೈಬಿಟ್ಟಿದ್ದು ಇವರಿಬ್ಬರೂ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಟೀಕಿಸಿದವರಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಒಳಗೊಂಡಂತೆ,ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸದಸ್ಯರಾಗಿದ್ದಾರೆ.

80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.

ಲಖಿಂಪುರ್ ಖೇರಿಯಲ್ಲಿ ನಡೆದ ಘಟನೆಯನ್ನು ಖಂಡಿಸಿದ ಕೆಲವೇ ಗಂಟೆಗಳಲ್ಲಿ ಗಾಂಧಿಯವರನ್ನು ಹೊರಗಿಡಲಾಯಿತು. ವರುಣ್ ಗಾಂಧಿಯವರು ಗುರುವಾರ ಲಖಿಂಪುರ್ ಖೇರಿ ಘಟನೆಯ ವಿಡಿಯೊ ಪೋಸ್ಟ್ ಮಾಡಿ ಮುಗ್ಧ ರೈತರ ಜೀವಹಾನಿಯ ಹೊಣೆಯಾರದು ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ವರುಣ್​ ಗಾಂಧಿ, ಈ ವಿಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ರೈತರನ್ನು ಹತ್ಯೆ ಮಾಡುವ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಇದೀಗ ಮುಗ್ಧ ರೈತರ ರಕ್ತ ಹೊರಚೆಲ್ಲಿದೆ. ಅದಕ್ಕೆ ತಕ್ಕದಾದ ಉತ್ತರ ಕೊಡಬೇಕು. ಪ್ರತಿಯೊಬ್ಬ ರೈತರ ಮನಸಲ್ಲಿ ಪ್ರತೀಕಾರದ ಕ್ರೌರ್ಯ ಹುಟ್ಟುವ ಮೊದಲು ಅವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ. ಅಕ್ಟೋಬರ್​ 5ರಂದು ಒಂದು ವಿಡಿಯೋ ವೈರಲ್​ ಆಗಿತ್ತು. ಅದನ್ನೂ ಕೂಡ ವರುಣ್​ ಗಾಂಧಿ ಶೇರ್ ಮಾಡಿಕೊಂಡಿದ್ದರು. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಉದ್ದೇಶ ಪೂರ್ವಕವಾಗಿಯೇ ವಾಹನಗಳನ್ನು ಹರಿಸಿರುವ ಈ ವಿಡಿಯೋ ಎಂಥವರ ಆತ್ಮವನ್ನೂ ನಡುಗಿಸುತ್ತದೆ. ಪೊಲೀಸರು ಈ ವಿಡಿಯೋವನ್ನು ಸರಿಯಾಗಿ ನೋಡಬೇಕು. ಈ ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು, ಘಟನೆಯಲ್ಲಿ ಭಾಗಿಯಾದ ಇತರ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪ್ರಕರಣವಾಗಿದ್ದು, ಘಟನೆಯಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಹೆಸರು ಕೇಳಿಬಂದಿದೆ. ಅವರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿದೆ. ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್​​ನ ನಿವೃತ್ತ ನ್ಯಾಯಾಧೀಶ ಪ್ರದೀಪ್​ ಕುಮಾರ್ ಶ್ರೀವಾಸ್ತವ್​ ಅವರನ್ನು ನೇಮಕ ಮಾಡಿದ್ದು, ಅವರು ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಇನ್ನೆರಡು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *