ಭಾರತ ತಂಡದಲ್ಲಿ ಈ ಇಬ್ಬರು ಆಟಗಾರರನ್ನು ತೆಗೆದು ಬೇರೆಯವರನ್ನು ಆಡಿಸಿ ಎಂದ ಸುನೀಲ್‌ ಗವಾಸ್ಕರ್‌ !

ಹೊಸದಿಲ್ಲಿ: ಪಾಕಿಸ್ತಾನ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿರುವ ಭಾರತ ತಂಡ ಸೆಮಿಫೈನಲ್‌ ಹಾದಿಯನ್ನು ಸುಗಮವಾಗಿರಿಸಿಕೊಳ್ಳಬೇಕೆಂದರೆ ಅಕ್ಟೋಬರ್‌ 31 ರಂದು ನ್ಯೂಜಿಲೆಂಡ್‌ ವಿರುದ್ಧ ಗೆಲುವು ಅಗತ್ಯವಿದೆ.

ಈ ಮಹತ್ವದ ಕಾದಾಟಕ್ಕೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ. ಬೌಲ್‌ ಮಾಡಲು ಅಶಕ್ತರಾಗಿರುವ ಹಾರ್ದಿಕ್‌ ಪಾಂಡ್ಯ ಮತ್ತು ಫಾರ್ಮ್‌ ಕಳೆದುಕೊಂಡಿರುವ ಭುವನೇಶ್ವರ್ ಕುಮಾರ್‌ ಅವರ ಸ್ಥಾನದಲ್ಲಿ ಬೇರೆ ಆಟಗಾರರನ್ನು ಆಡಿಸುವಂತೆ ಸನ್ನಿ ಸೂಚಿಸಿದ್ದಾರೆ.

ಸ್ಪೋರ್ಟ್ಸ್ ತಕ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, “ಹಾರ್ದಿಕ್‌ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು ಹಾಗೂ ಅವರು ಸದ್ಯ ಬೌಲ್‌ ಮಾಡಲು ಅಶಕ್ತರಾಗಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಅದ್ಭುತ ಫಾರ್ಮ್‌ನಲ್ಲಿರುವ ಇಶಾನ್‌ ಕಿಶನ್‌ ಅವರನ್ನು ಖಚಿತವಾಗಿ ಪರಿಗಣಿಸಬೇಕಾಗಿದೆ. ಜತೆಗೆ ಭುವನೇಶ್ವರ್ ಕುಮಾರ್‌ ಜಾಗಕ್ಕೆ ಶಾರ್ದುಲ್‌ ಠಾಕೂರ್‌ಗೆ ಸ್ಥಾನ ಕಲ್ಪಿಸಬೇಕು. ಇದರ ಹೊರತಾಗಿ ಹೆಚ್ಚಿನ ಬದಲಾವಣೆ ಮಾಡಬಾರದು, ಒಂದು ವೇಳೆ ಮಾಡಿದರೆ ಎದುರಾಳಿ ನಿಮ್ಮನ್ನು ನೋಡಿ ಗಾಬರಿಗೊಂಡಿದೆ ಎಂದು ಪರಿಗಣಿಸಬಹುದು,” ಎಂದು ಹೇಳಿದರು.

ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಹಾರ್ದಿಕ್‌ ಪಾಂಡ್ಯ ನಿಯಮಿತವಾಗಿ ಬೌಲ್‌ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವರು ಭಾರತ ತಂಡದ ಮೂರೂ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರ ಹೊರತಾಗಿಯೂ ಅವರನ್ನು ಮ್ಯಾಚ್‌ ಫಿನಿಷರ್‌ ಆಗಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ಪರಿಗಣಿಸಿದೆ.

ಕಳೆದ ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಆಡಿದ್ದರೂ ಬೌಲ್‌ ಮಾಡಿರಲಿಲ್ಲ. ಆದರೆ, ಬ್ಯಾಟಿಂಗ್‌ ವೇಳೆ ಭುಜದಲ್ಲಿ ನೋವು ಕಾಣಿಸಿಕೊಂಡಿತ್ತು. ಇನ್ನು ನ್ಯೂಜಿಲೆಂಡ್‌ ವಿರುದ್ಧ ಮುಂದಿನ ಪಂದ್ಯಕ್ಕೆ ಹಾರ್ದಿಕ್‌ ಪಾಂಡ್ಯ ಅವರನ್ನು ವಿರಾಟ್‌ ಕೊಹ್ಲಿ ಬೆಂಬಲಿಸಿದ್ದು, ನೆಟ್ಸ್‌ನಲ್ಲಿ ಅವರಿಂದ ಬೌಲ್‌ ಮಾಡಿಸಿದ್ದಾರೆ. ಆ ಮೂಲಕ ಪಂದ್ಯದಲ್ಲಿ ಕನಿಷ್ಠ ಎರಡು ಓವರ್‌ ಬೌಲ್‌ ಮಾಡಿಸುವ ಯೋಜನೆ ಕೊಹ್ಲಿಯದ್ದಾಗಿರಬಹುದು.

ಇದರ ಹೊರತಾಗಿಯೂ ಸುನೀಲ್‌ ಗವಾಸ್ಕರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಸೇರಿಸಿ ಎರಡು ಬದಲಾವಣೆ ತಂಡದಲ್ಲಿ ತರಬೇಕೆಂದು ಸಲಹೆ ನೀಡಿದ್ದಾರೆ. ಅಲ್ಲದೆ, ಇದಕ್ಕಿಂತ ಜಾಸ್ತಿ ಬದಲಾವಣೆ ತಂದರೆ, ತಂಡ ಗಾಬರಿಗೊಂಡಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದಿದ್ದಾರೆ.

“ಮೊದಲೇ ಇದನ್ನು ನಾನು ಹೇಳಿದ್ದೇನೆ. ಜಾಸ್ತಿ ಬದಲಾವಣೆ ತಂದರೆ, ತಂಡ ಗಾಬರಿಗೊಂಡಿದೆ ಎಂದಾಗುತ್ತದೆ. ಭಾರತ ಅತ್ಯುತ್ತಮ ತಂಡವಾಗಿದ್ದರಿಂದ ಗಾಬರಿ ಬೀಳುವ ಅಗತ್ಯವಿಲ್ಲ. ಹೌದು ನೀವು ಉತ್ತಮ ತಂಡದ ವಿರುದ್ಧ ಸೋತಿದ್ದೀರಿ, ಆದರೆ, ಇದರರ್ಥ ಮುಂದಿನ ಪಂದ್ಯ ಗೆಲ್ಲವುದಿಲ್ಲ ಅಥವಾ ಟೂರ್ನಿ ಗೆಲ್ಲುವುದಿಲ್ಲ ಎಂದು ಅರ್ಥವಲ್ಲ,” ಎಂದು ಹೇಳಿದ್ದಾರೆ.

“ಮುಂದಿನ ನಾಲ್ಕು ಪಂದ್ಯಗಳಲ್ಲಿ ನೀವು ಗೆಲುವು ಪಡೆದಿದ್ದೇ ಆದಲ್ಲಿ ಸೆಮಿಫೈನಲ್ ಪ್ರವೇಶಿಸುವುದು ಸ್ಪಷ್ಟವಾಗುತ್ತದೆ ಹಾಗೂ ಫೈನಲ್‌ ಪ್ರವೇಶಿಸುವುದು ಕೂಡ ಪಕ್ಕಾ ಎಂದಾಗುತ್ತದೆ. ಹಾಗಾಗಿ, ತಂಡದಲ್ಲಿ ಎರಡಕ್ಕಿಂತ ಹೆಚ್ಚಿನ ಬದಲಾವಣೆ ತರುವ ಅಗತ್ಯವಿಲ್ಲ,” ಎಂದು ಭಾರತದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *