ಮತ್ತೆ ಕ್ರಿಕೆಟ್ ಅಖಾಡಕ್ಕೆ ಇಳಿಯುವುದಾಗಿ ಹೇಳಿದ ಯುವರಾಜ್ ಸಿಂಗ್ !

ಟೀಮ್ ಇಂಡಿಯಾದಲ್ಲಿ ಬದಲಾವಣೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಯುವರಾಜ್ ಸಿಂಗ್ ಶಾಕ್ ಕೊಟ್ಟಿದ್ದಾರೆ. ಎರಡು ವರ್ಷದ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಯುವಿ ಇದೀಗ ಮತ್ತೆ ಕ್ರಿಕೆಟ್ ಅಖಾಡಕ್ಕೆ ಇಳಿಯುವುದಾಗಿ ಹೇಳಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ಧಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ತಮ್ಮ ಕಂಬ್ಯಾಕ್ ನಿರ್ಧಾರವನ್ನು ತಿಳಿಸಿದ್ಧಾರೆ. ಎಲ್ಲವೂ ಅಂದುಕೊಂಡಂತೆ ಆದರೆ 39 ವರ್ಷದ ಯುವರಾಜ್ ಸಿಂಗ್ ಅವರು ಫೆಬ್ರವರಿ ತಿಂಗಳಲ್ಲಿ ಕ್ರಿಕೆಟ್ ಅಂಗಳದಲ್ಲಿ ಬ್ಯಾಟು ಬಾಲು ಹಿಡಿದು ನಿಲ್ಲಲಿದ್ದಾರೆ.

“ನಿಮ್ಮ ಹಣೆಬರಹ ಆ ದೇವರು ನಿರ್ಧರಿಸುತ್ತಾನೆ. ಸಾರ್ವಜನಿಕ ಒತ್ತಾಯದ ಮೇಲೆ ನಾನು ಫೆಬ್ರವರಿ ತಿಂಗಳಲ್ಲಿ ಕ್ರಿಕೆಟ್ ಅಂಗಳಕ್ಕೆ ಇಳಿಯುವ ನಿರೀಕ್ಷೆ ಇದೆ. ನನಗಾಗುತ್ತಿರುವ ಭಾವನೆ ವರ್ಣಿಸಲು ಅಸಾಧ್ಯ. ನಿಮ್ಮ ಪ್ರೀತಿ ಮತ್ತು ಅಭಿಲಾಷೆಗೆ ನಾನು ಧನ್ಯ. ನಿಮ್ಮ ಉತ್ತೇಜನ ಹೀಗೇ ಇರಲಿ. ಇದು ನಮ್ಮ ತಂಡ. ಒಬ್ಬ ನಿಜವಾದ ಅಭಿಮಾನಿಯಾದವರು ಈ ಕಷ್ಟದ ಸಂಸರ್ಭದಲ್ಲಿ ತನ್ನ ತಂಡಕ್ಕೆ ಬೆಂಬಲ ತೋರುತ್ತಾರೆ. ಜೈ ಹಿಂದ್” ಎಂದು ಯುವರಾಜ್ ಸಿಂಗ್ ಬರೆದಿದ್ದಾರೆ.

ಟೀಮ್ ಇಂಡಿಯಾಗೆ ತಾನು ಕೊನೆಯ ಬಾರಿ ಗಳಿಸಿದ ಶತಕದ ಇನ್ನಿಂಗ್ಸ್​ನ ವಿಡಿಯೋ ಕ್ಲಿಪ್ ಅನ್ನು ತಮ್ಮ ಪೋಸ್ಟ್​ಗೆ ಸೇರಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಎರಡು ಪಂದ್ಯ ಸೋತು ಸಾಕಷ್ಟು ಟೀಕೆಗೆ ಗುರಿಯಾಗಿರುವ ಟೀಮ್ ಇಂಡಿಯಾಗೆ ಕ್ರಿಕೆಟ್ ಪ್ರೇಮಿಗಳ ಬೆಂಬಲ ನಿಲ್ಲಬಾರದು ಎಂಬ ಮನವಿಯನ್ನೂ ಅವರು ಮಾಡಿದ್ಧಾರೆ.

ಈ ಮೇಲಿನ ಪೋಸ್ಟ್​ನಲ್ಲಿರುವ ವಿಡಿಯೋದಲ್ಲಿರುವುದು ಯುವರಾಜ್ ಸಿಂಗ್ ಅವರ ಶತಕದ ಆಟ. ಒಡಿಶಾದ ಕಟಕ್​ನಲ್ಲಿ ಇಂಗ್ಲೆಂಡ್ ವಿರುದ್ಧ 2017ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಗಳಿಸಿದ ಅವರು 150 ರನ್ ಗಳಿಸಿದ್ದರು. ಆ ವಿಡಿಯೋ ಶೇರ್ ಮಾಡುವ ಮೂಲಕ ಯುವರಾಜ್ ಸಿಂಗ್ ತಾನು ಮತ್ತೊಮ್ಮೆ ಟೀಮ್ ಇಂಡಿಯಾಗಾಗಿ ರನ್ ಬೇಟೆ ಆಡಲು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ಧಾರೆ.

2011ರ ವಿಶ್ವಕಪ್ ಹೀರೋ ಯುವಿ:
ಯುವರಾಜ್ ಸಿಂಗ್ 2011ರ ಓಡಿಐ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಭಾರತ ತಂಡ ಚಾಂಪಿಯನ್ ಆಗಲು ಯುವರಾಜ್ ಸಿಂಗ್ ಅವರೇ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್​ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅವರು ಮಿಂಚಿದ್ದರು. ಪ್ಲೇಯರ್ ಆಫ್ ದ ಟೂರ್ನಮೆಂಟ್ ಗೌರವ ಪಡೆದಿದ್ದರು.

ಆ ವಿಶ್ವಕಪ್​ನಲ್ಲಿ ಯುವರಾಜ್ ಸಿಂಗ್ 90.50 ಸರಾಸರಿಯಲ್ಲಿ 362 ರನ್ ಗಳಿಸಿದ್ದರು. ತಮ್ಮ ಸ್ಪಿನ್ ದಾಳಿಯಿಂದ 15 ವಿಕೆಟ್ ಕೂಡ ಪಡೆದಿದ್ದರು. ಅದು ಯುವರಾಜ್ ಸಿಂಗ್ ವೃತ್ತಿಜೀವನದ ಸರ್ವೋತ್ಕೃಷ್ಟ ಪ್ರದರ್ಶನವೆಂದು ಪರಿಗಣಿಸಲಾಗಿದೆ.

ದುರದೃಷ್ಟ ಎಂದರೆ ಯುವರಾಜ್ ಸಿಂಗ್ ಪೀಕ್ ಫಾರ್ಮ್​ನಲ್ಲಿದ್ದಾಗಲೇ ಕ್ಯಾನ್ಸರ್ ರೋಗ ವಕ್ಕರಿಸಿತ್ತು. ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಯುವರಾಜ್ ಸಿಂಗ್ ಅವರಿಗೆ ಕ್ಯಾನ್ಸರ್ ಮಾರಿ ಇರುವುದು ದೃಢಪಟ್ಟಿತು. ಕೆಚ್ಚೆದೆಯ ಹೋರಾಟಗಾರನಾದ ಯುವಿ ಆ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಜೀವಂತವಾಗಿ ಕಂಬ್ಯಾಕ್ ಮಾಡಿದರು.

ಆದರೆ, ಕ್ಯಾನ್ಸರ್​ನಿಂದ ಗುಣಮುಖರಾಗಿ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟ ಯುವಿಗೆ ನಿರೀಕ್ಷಿಸಿದಂತೆ ಬ್ಯಾಟ್ ಮತ್ತು ಬಾಲ್ ಕೈಹಿಡಿಯಲಿಲ್ಲ. ಎಂದಿನ ಲಯ ಕಂಡುಕೊಳ್ಳಲು ವಿಫಲರಾದರು. ಅಂತಿಮವಾಗಿ ಅವರು 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರು.

ನಿವೃತ್ತಿ ಬಳಿಕ ಅವರು ವಿಶ್ವದ ಕೆಲ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದರು. ಕೆನಡಾದ ಜಿಟಿ20 ಲೀಗ್, ಅಬುಧಾಬಿ ಟಿ10 ಲೀಗ್ ಟೂರ್ನಿಗಳಲ್ಲಿ ಆಡಿದ್ದಾರೆ. ಇದೇ ವರ್ಷ ಕೆಲ ತಿಂಗಳ ಹಿಂದೆ ನಡೆದ ರೋಡ್ ಸೇಫ್ಟಿ ಸೀರೀಸ್​ನಲ್ಲೂ ಅವರು ಆಡಿದ್ದರು.

ಮುಂದಿನ ವರ್ಷದ ಜನವರಿಯಿಂದ ಮಾರ್ಚ್​ವರೆಗೂ ರಣಜಿ ಟೂರ್ನಿ ನಡೆಯುವ ನಿರೀಕ್ಷೆ ಇದ್ದು, ಪಂಜಾಬ್ ತಂಡದ ಪರ ಯುವಿ ಆಡುವ ಸಾಧ್ಯತೆ ಇಲ್ಲದಿಲ್ಲ.

Leave a Reply

Your email address will not be published. Required fields are marked *