ಟಿ20 ವಿಶ್ವಕಪ್: ಅಫಘಾನಿಸ್ತಾನವನ್ನು ಸದೆಬಡಿದ ಭಾರತಕ್ಕೆ ಚೊಚ್ಚಲ ಜಯ

ಅಬುದಾಬಿ: ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2 ಹಂತದ ಪಂದ್ಯದಲ್ಲಿ ಭಾರತ ತಂಡ ಆಫ್ಘಾನಿಸ್ತಾನದ ವಿರುದ್ಧ 66 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಅಬುದಾಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 144/7ಕ್ಕೆ ಕಟ್ಟಿಹಾಕುವ ಮೂಲಕ ಭಾರತ ತಂಡ 66 ರನ್ ಗಳ ಬೃಹತ್ ಜಯ ಗಳಿಸಿದೆ. ಟೂರ್ನಿಯಲ್ಲಿ ಭಾರತಕ್ಕೆ ಇದು ಮೊದಲ ಗೆಲುವಾಗಿದೆ.

ಭಾರತ ನೀಡಿದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಮಹಮದ್ ಶಹ್ಜಾದ್ (0) ಮತ್ತು ಹಜ್ರತ್ತುಲ್ಲಾ (13) ಬೇಗನೆ ಔಟ್ ಆದರು. ಬಳಿಕ ಜೊತೆಗೂಡಿದ ಗುರ್ಬಾಜ್ ಮತ್ತು ನೈಬ್ ಜೋಡಿ ಕೊಂಚ ಪ್ರತಿರೋಧ ಒಡ್ಡಿದರಾದರೂ 37 ರನ್ ಈ ಜೊತೆಯಾಟ ಅಂತ್ಯವಾಯಿತು. ಅಂತಿಮ ಹಂತದಲ್ಲಿ ನಾಯಕ ನೈಬ್ (35 ರನ್)ಕರೀಮ್ ಜನತ್ (ಅಜೇಯ 42 ರನ್) ಭಾರತಕ್ಕೆ ಪ್ರತಿರೋಧ ತೋರಿದರೂ ಅಷ್ಟು ಹೊತ್ತಿಗಾಗಲೇ ಪಂದ್ಯ ಕೈ ಜಾರಿತ್ತು.

ಅಂತಿಮವಾಗಿ ಆಫ್ಘಾನಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ 66 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.

74 ರನ್ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *