ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ; 73 ರನ್​ಗಳ ಭರ್ಜರಿ ಜಯ ಸಾಧಿಸಿದ ರೋಹಿತ್ ಪಡೆ

ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಸರಿಯಾಗಿ ಸೇಡು ತೀರಿಸಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಇಂದು ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ.

73 ರನ್​ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ದದ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಈ ಬಾರಿ ನಡೆದ ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ ಮಣಿಸಿತ್ತು. ಇದೀಗ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್​ ಮಾಡಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಸೋಲಿನ ಸೇಡನ್ನು ತೀರಿಸಿಕೊಂಡಂತಾಗಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (56) ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 184 ರನ್​ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 17.2 ಎಸೆತಗಳಲ್ಲಿ 111 ರನ್​ಗೆ ಸರ್ವಪತನ ಕಾಣುವ ಮೂಲಕ ಹೀನಾಯವಾಗಿ ಸೋಲನುಭವಿಸಿತು. ಟೀಮ್ ಇಂಡಿಯಾ 3 ಓವರ್​ನಲ್ಲಿ 9 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಅಕ್ಷರ್ ಪಟೇಲ್ ಯಶಸ್ವಿ ಬೌಲರ್ ಎನಿಸಿಕೊಂಡರು.

ರೋಹಿತ್ ಶರ್ಮಾ ಅರ್ಧಶತಕ
ಇದಕ್ಕೂ ಮೊದಲು ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕೆಎಲ್ ರಾಹುಲ್ ಅವರ ಬದಲು ತಂಡಕ್ಕೆ ಬಂದ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಕೇವಲ 6 ಓವರ್​ನಲ್ಲಿ ಅವರಿಬ್ಬರು 60ಕ್ಕೂ ಹೆಚ್ಚು ರನ್ ಗಳಿಸಿದರು. ಇಶಾನ್ ಔಟಾದ ಬಳಿಕ ಭಾರತಕ್ಕೆ ಒಳ್ಳೆಯ ಜೊತೆಯಾಟ ಬರದೇ ಹೋದರೂ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಮತ್ತು ಬಾಲಂಗೋಚಿಗಳಾದ ಹರ್ಷಲ್ ಪಟೇಲ್ ಹಾಗೂ ದೀಪಕ್ ಚಾಹರ್ ಅವರು ರನ್ ಓಟ ಕಡಿಮೆಯಾಗದಂತೆ ನೋಡಿಕೊಂಡರು. ರೋಹಿತ್ ಶರ್ಮಾ ಅರ್ಧಶತಕ ಭಾರಿಸಿದರು. ದೀಪಕ್ ಚಾಹರ್ ಅವರಂತೂ ಕೇವಲ 8 ಬಾಲ್​ನಲ್ಲಿ 21 ರನ್ ಗಳಿಸಿದ ಫಲವಾಗಿ ಭಾರತದ ಸ್ಕೋರು 184 ರನ್ ತಲುಪಲು ಸಾಧ್ಯವಾಯಿತು.

ಮುಂದಿದೆ ಟೆಸ್ಟ್ ಸರಣಿ:
ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೀಮ್ ಇಂಡಿಯಾಗೆ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಸವಾಲು ಎದುರಾಗಲಿದೆ. ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ಅಲಭ್ಯ ಇದ್ದಾರೆ. ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಆಡುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್ ಮತ್ತು ಪ್ರಸಿದ್ಧ್ ಕೃಷ್ಣ, ಈ ಮೂವರು ಕನ್ನಡಿಗರು ಟೆಸ್ಟ್ ತಂಡದಲ್ಲಿ ಇದ್ದಾರೆ. ನ. 25ರಂದು ಮೊದಲ ಪಂದ್ಯ ಕಾನಪುರ್​ನಲ್ಲಿ ಆರಂಭಗೊಳ್ಳಲಿದೆ.

ಎರಡನೇ ಪಂದ್ಯ ಮುಂಬೈನಲ್ಲಿ ಡಿಸೆಂಬರ್ 3ರಿಂದ ನಡೆಯಲಿದೆ. ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯ ಇರಲಿದ್ಧಾರೆ. ಅವರೇ ಆ ಪಂದ್ಯವನ್ನು ಮುನ್ನಡೆಸಲಿದ್ಧಾರೆ.

Leave a Reply

Your email address will not be published. Required fields are marked *