ಎಸಿಬಿ ದಾಳಿ ವೇಳೆ ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್ ನಲ್ಲಿಯೂ ಕಂತೆ ಕಂತೆ ಹಣ ಪತ್ತೆ !

ಕಲಬುರಗಿ: ರಾಜ್ಯದಲ್ಲಿ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ (ACB raid) ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು 408 ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತಿನ ಬೆನ್ನ ಹತ್ತಿ ಹೊರಟಿದ್ದಾರೆ.

ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗ-ನಾಣ್ಯ, ಸಂಪತ್ತು ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ಬೆಚ್ಚುಬೀಳುವಂತಾಗಿದೆ. ದಾಳಿ ವೇಳೆ ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಸಂಬಂಧಪಟ್ಟ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿಗಳನ್ನು ಶೋಧ ಮಾಡಲಾಗುತ್ತಿದೆ ಎನ್ನುವುದು ವಿಶೇಷ.

ಇತ್ತ ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್ ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ! ಪಿಡಬ್ಲೂಡಿ ಜೆ.ಇ. ಶಾಂತಗೌಡ ಬಿರಾದಾರ್ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಮನೆಯ ನೀರಿನ ಪೈಪ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಬರುತ್ತಿದ್ದಂತೆಯೇ ಭ್ರಷ್ಟ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್ ನಲ್ಲಿ ಹಣ ಹಾಕಿದ್ದರು.

ಪ್ಲಂಬರ್​ನನ್ನು ಕರೆಸಿ, ಪೈಪ್ ಕಟ್ ಮಾಡಿಸಿ, ಕಂತೆ ಕಂತೆ ಹಣ ಹೊರಕ್ಕೆ ತೆಗೆಯುತ್ತಿದ್ದಾರೆ. ಮನೆಯ ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್ ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಮತ್ತು ಆತನ ಪುತ್ರ ವಾಸವಿರುವ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿ ಮನೆಯ ಪೈಪ್ ನಲ್ಲಿ ಹಣ ಈ ರೂಪದಲ್ಲಿ ಪತ್ತೆಯಾಗಿದೆ. ಮನೆಯ ಎರಡನೇ ಪ್ಲೋರ್ ನಲ್ಲಿ ವಾಸವಾಗಿರೋ ಶಾಂತಗೌಡ ಅಧಿಕಾರಿಗಳು ಬರ್ತಾಯಿದ್ದಂತೆ ಹಣದ ಕಂತೆಯನ್ನು ಪೈಪ್ ನಲ್ಲಿ ಹಾಕಿದ್ದಾರೆ.

ಪೈಪ್ ನಲ್ಲಿಯೇ ಐದು ಲಕ್ಷ ಕ್ಕೂ ಅಧಿಕ ಹಣ ಪತ್ತೆ
ಎಸಿಬಿ ಮೂಲಗಳ ಪ್ರಕಾರ ಶಾಂತನಗೌಡರ್ ಮನೆಯ ಪೈಪ್ ಗಳಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಈ ವೇಳೆ ಸುಮಾರು 5 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರ ಹೊರತಾಗಿ, ಆಯಾ ಮನೆಗಳ ಪರಿಶೀಲನೆ ನಂತರ ಬ್ಯಾಂಕ್​ ಶಾಖೆಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲು ಎಸಿಬಿ ತಿರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆಗಳು, ಚಿನ್ನ ಹಾಗೂ ಸಂಪತ್ತು ಪತ್ತೆಯಾಗುವ ಸಾಧ್ಯೆತೆಯಿದೆ.

Leave a Reply

Your email address will not be published. Required fields are marked *