ಬಸವನಗುಡಿ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ ಹಂಸಲೇಖ; ಭಜರಂಗದಳ-ಹಂಸಲೇಖ ಪರ ಬಂದವರ ನಡುವೆ ವಾಗ್ವಾದ; ನಟ ಚೇತನ್​ ಧರಣಿ

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿಕೆ ಆರೋಪದ ದೂರಿನ ಕುರಿತ ಹೇಳಿಕೆ ನೀಡಲು ಇಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬಸವನಗುಡಿ ಠಾಣೆಗೆ ಆಗಮಿಸಿ ಹೇಳಿಕೆ ದಾಖಲಿಸಿದ್ದಾರೆ. ಹಂಸಲೇಖ ಅವರ ಆಗಮನಕ್ಕೂ ಮುನ್ನ ಹಂಸಲೇಖ ಪರ ವಕೀಲರಾದ ದ್ವಾರಕಾನಾಥ್​ ಠಾಣೆಗೆ ಆಗಮಿಸಿದ್ದರು.

ನಟ ಅಹಿಂಸಾ ಚೇತನ್​ ಧರಣಿ
ಹಂಸಲೇಖ ಅವರ ಜೊತೆಗೆ ನಟ ಅಹಿಂಸಾ ಚೇತನ್​ ಕೂಡ ಪೊಲೀಸ್​ ಠಾಣೆಗೆ ಆಗಮಿಸಿದರು. ಅವರ ಆಗಮಕ್ಕೆ ಭಜರಂಗದಳ ಕಾರ್ಯಕರ್ತರು ವಿರೋಧಿಸಿ ಧಿಕ್ಕಾರ ಕೂಗಿದರು. ಅವರ ಆಗಮನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ಅಹಿಂಸಾ ಚೇತನ್​​ ತಮ್ಮ ಬೆಂಬಲಿಗರೊಂದಿಗೆ ಠಾಣೆ ಎದುರು ಧರಣಿ ನಡೆಸಿದರು.

ಚೇತನ್​ ಆಗಮನಕ್ಕೆ ವಿರೋಧ
ಈ ವೇಳೆ ಭಜರಂಗದಳ ಹಾಗೂ ಹಂಸಲೇಖ ಪರ ಬಂದವರ ನಡುವೆ ವಾಗ್ವಾದ ಉಂಟಾಗಿ ಠಾಣೆಯ ಮುಂದೆ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು. ಇನ್ನು ಇದೇ ವೇಳೆ ನಟ ಅಹಿಂಸಾ ಚೇತನ್​ ಕೂಡ ಠಾಣೆಗೆ ಆಗಮನಕ್ಕೆ ವಿರೋಧ ವ್ಯಕ್ತವಾಯಿತು. ಚೇತನ್​ ಹಿಂದೂಗಳನ್ನು ಒಡೆಯುವ ಕೆಲಸ ಮಾಡುತ್ತಾರೆ. ಅವರು ಯಾವುದೇ ಕಾರಣಕ್ಕೂ ಹಂಸಲೇಖ ಜೊತೆ ಠಾಣೆ ಒಳಗೆ ಬಿಡಬಾರದು ಎಂದು ಅವರ ವಿರುದ್ಧ ಧಿಕ್ಕಾರ ಕೂಗಿದರು. . ಚೇತನ್​ ಬಂದರೆ ನಾವು ಠಾಣೆ ಬಳಿ ಬಿಡುವುದಿಲ್ಲ ಎಂದು ಭಜರಂಗ ದಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದೇ ವೇಳೆ ಎರಡು ಗುಂಪುಗಳು ರಸ್ತೆಯಲ್ಲಿ ಪರಸ್ಪರ ಪ್ರತಿಭಟನಾ ಧರಣಿ ನಡೆಸಿವೆ

ಬಿಗಿ ಬಂದೋಬಸ್ತ್​
ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆಗೆ ಭಜರಂಗದಳ ಕಾರ್ಯಕರ್ತರು ಭಾರೀ ಖಂಡನೆ ವ್ಯಕ್ತಪಡಿಸಿದ್ದರು. ಇಂದು ಹಂಸಲೇಖ ಅವರು ಠಾಣೆಗೆ ಆಗಮಿಸುವ ಹಿನ್ನಲೆ ಭಾರೀ ಸಂಖ್ಯೆಯ ಭಜರಂಗದಳ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ್ದಾರೆ. ಈ ವೇಳೆ ಹಂಸಲೇಖ ಪರ ಕೂಡ ಹಲವರು ಸಂಘಟನೆಗಳು ಬೆಂಬಲಕ್ಕೆ ಆಗಮಿಸಿದೆ. ಈ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಬಿಗಿ ಬಂದೋ ಬಸ್ತ್​ ನಡೆಸಿದ್ದಾರೆ.

ದೂರು ನೀಡಿದ ಕಾರಣವೇನು?
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ದಲಿತರ ಮನೆಗೆ ಪೇಜಾವರ ಶ್ರೀಗಳಯು ಹೋಗಬಹುದು. ಆದರೆ, ಅವರ ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನಲು ಸಾಧ್ಯವಾ ಎಂದಿದ್ದರು. ಅವರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಹಂಸಲೇಖ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೋರಿದ್ದರು. ಈ ಸಂಬಂಧ ಬಸವನ ಗುಡಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ದೂರಿನ ವಿಚಾರಣೆಗೆ ಈ ಹಿಂದೆ ಅನಾರೋಗ್ಯದ ಹೇಳಿಕೆ ನೀಡಿ ಹಂಸಲೇಖ ಅವರು ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಪೊಲೀಸರು ನ. 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರು. ಆ ನೋಟಿಸ್​​ನಂತೆ ಇಂದು ಹಂಸಲೇಖ ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *