ನಮ್ಮ ಮನೆಯಂಗಳದಲ್ಲೂ ಲೈಂಗಿಕ ದೌರ್ಜನ್ಯವೇ?

ಹಲವಾರು ವರ್ಷಗಳಿಂದಲೇ ನಾವು ಅನೇಕಾನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾದಂತೆ ಕೇಳುತ್ತಿದ್ದೇವೆ. ಈ ಕುರಿತಾದಂತೆ ಪ್ರತಿಭಟನೆಯನ್ನೂ ಮಾಡುತ್ತಿದ್ದೇವೆ. ಮರುಗಬೇಕಾದವರಿಗೆ ಒಂದಿಷ್ಟು ಮರುಗಿ ಸುಮ್ಮನಾಗುತ್ತೇವೆ. ದೂರದ ಉತ್ತರಪ್ರದೇಶ, ಕಾಶ್ಮೀರ, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಹೆಚ್ಚಾಗಿ ಈ ಪ್ರಕರಣಗಳು ವರದಿಯಾಗುತ್ತಿದ್ದವು. ಆಘಾತಕಾರಿ ವಿಷಯವೇನೆಂದರೆ ಸದ್ಯ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲೂ ಪುಟ್ಟ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ಅಮಾನವೀಯ ದೌರ್ಜನ್ಯ. ದೂರದಲ್ಲೆಲ್ಲೋ ನಡೆಯಿತು ಎಂದಾಕ್ಷಣ ಒಂದಿಷ್ಟು ಐ ಸಪೋರ್ಟ್ ಡಿಪಿಗಳು ಹಾಗೂ ವಾಟ್ಸಾಪ್ ಮೆಸೇಜ್ ಗಳನ್ನು ಫಾರ್ವಾಡ್ ಮಾಡಿ ಸುಮ್ಮನಾಗುವ ನಾವು ಸದ್ಯ ಒಂದಿಷ್ಟು ಚಿಂತಿಸಬೇಕಾದ ಸಂದರ್ಭ ಬಂದೊದಗಿದೆ.

ಬಂಟ್ವಾಳ ತಾಲೂಕಿನ ಗೂಡಿನ ಬಳಿ ಎಂಬಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆ ಬಾಲಕಿಗೆ ಕೇವಲ ಎಂಟು ವರ್ಷ ವಯಸ್ಸು. ಮೂವರು ಆರೋಪಿಗಳಲ್ಲಿ ಓರ್ವ ಆರೋಪಿಗೆ 65 ವರ್ಷ ವಯಸ್ಸು. ಮಗುವನ್ನು ಮಡಿಲಲ್ಲಿ ಕೂರಿಸಿ ಒಂದಿಷ್ಟು ಹಳೆಯ ಕಥೆಗಳನ್ನು ಹೇಳಿಕೊಡಬೇಕಾಗಿದ್ದ ಹಿರಿಯರೇ ಈ ಪ್ರಕರಣದ ಪ್ರಮುಖ ಆರೋಪಿ. ಸಮಾಜದಲ್ಲಿ ಸಂಭಾವಿತರಂತೆ ಸೋಗು ಹಾಕಿಕೊಂಡು ನಡೆದಾಡುವವರ ಇಂಥಹಾ ವ್ಯಾಘ್ರ ಮುಖಗಳು ಯಾರ ಅರಿವಿಗೂ ಬರುವುದಿಲ್ಲ. ಇದೇ ರೀತಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿ ಬೆದರಿಕೆಗಳಿಗೆ ಬಗ್ಗಿ ಮೌನವಾಗಿರುವ ಎಷ್ಟೋ ಪುಟ್ಟ ಬಾಲಕಿಯರ ಹೃದಯದೊಳಗೆ ಇಂಥಹಾ ದುರ್ಘಟನೆಗಳು ಇಂದಿಗೂ ಕನಸಲ್ಲೂ ಮುಳ್ಳಾಗಿ ಕಾಡುತ್ತಿರಬಹುದು.

ನಾವು ಮಾಡಬೇಕಾಗಿರುವುದೇನು?

ಈಗಿನ ಕಾಲದಲ್ಲಿ ತಂದೆ ತಾಯಿಗೆ ತಮ್ಮ ಮಕ್ಕಳನ್ನು ಸಂರಕ್ಷಿಸುವ ಕುರಿತಾದ ಕಾಳಜಿ ಕಡಿಮೆಯಾಗಿದೆ. ಆತ ಯಾರೋ ನಮ್ಮ ಸಂಬಂಧಿಕ, ಸಂಭಾವಿತ ವ್ಯಕ್ತಿ, ನನ್ನ ಮಗಳ ಮೇಲೆ ಆತನಿಗೆ ತುಂಬಾ ಪ್ರೀತಿ, ಮನೆಗೆ ಬಂದಾಕ್ಷಣ ಮಗಳನ್ನು ಎತ್ತಿಕೊಂಡು ಮುದ್ದಾಡುತ್ತಾನೆ ಎಂದು ಪೋಷಕರು ಸಂತೋಷಪಡುತ್ತಾರೆ. ಇಲ್ಲೂ ನಿಷ್ಕಲ್ಮಷ ಪ್ರೀತಿ ತೋರಿಸುವವರು ಇದ್ದೇ ಇರುತ್ತಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರಲ್ಲೂ ಕಲ್ಮಷ ತುಂಬಿರುವ ಮನಸ್ಸುಗಳು ಕಂಡು ಹುಡುಕಲು ನಾವು ಮೊದಲು ನಮ್ಮ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ.

ಗುಡ್ ಟಚ್ ಮತ್ತು ಬ್ಯಾಡ್ ಟಚ್:

ಪುಟ್ಟ ಮಕ್ಕಳಿಗೆ ಅವರು ಸಾಮಾನ್ಯವಾಗಿ ಹರೆಯಕ್ಕೆ ಬರುವ ಸಂದರ್ಭದಲ್ಲಿ ಅವರ ಜನನಾಂಗಗಳ ಬಗ್ಗೆ ಸಮರ್ಪಕ ಅರಿವು ಮೂಡಿಸಬೇಕಾದ ಕೆಲಸ ಪೋಷಕರದ್ದು, ಇನ್ನು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಅಂದರೆ ತಾಯಿ ಹೊರತುಪಡಿಸಿ ಇತರ ವ್ಯಕ್ತಿಗಳು ಮುಟ್ಟಬಹುದಾದ ಜಾಗ ಮತ್ತು ಮುಟ್ಟಬಾರದ ಜಾಗದ ಕುರಿತಾದಂತೆ ಮಕ್ಕಳಿಗೆ ತಿಳಿ ಹೇಳಬೇಕು. ಒಂದು ವೇಳೆ ಯಾರಾದರೂ ಅನುಚಿತ ವರ್ತನೆ ತೋರಿದರೆ ಅದನ್ನು ತಾಯಿಯೊಂದಿಗೆ ಹೇಳುವಂತೆ ಮಕ್ಕಳಿಗೆ ಮೊದಲೇ ಆದೇಶಿಸಬೇಕು. ಸಂಪೂರ್ಣವಾಗಿ ಪುಟ್ಟ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎನ್ನುತ್ತಿಲ್ಲ. ಅದಕ್ಕೆ ಅದರದ್ದೇ ಆದ ಸಂದರ್ಭವಿದೆ. ಆದರೆ ಮಕ್ಕಳಿಗೆ ಸ್ಪರ್ಶದ ಕುರಿತಾದ ಅರಿವು ಮೂಡಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಈ ಕುರಿತಾದಂತೆ ಕೆಳಗೆ ವೀಡಿಯೋವೊಂದನ್ನು ಲಗತ್ತಿಸಲಾಗಿದೆ.

ನಿಮ್ಮ ದೇಹ…ನಿಮ್ಮ ಹಕ್ಕು:

ಮಕ್ಕಳಿಗೆ ಅವರ ದೇಹದ ಕುರಿತಾದಂತೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಮಕ್ಕಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಅವರ ದೇಹದ ಅಂಗಾಂಗಳ ಕುರಿತು ಸಂಪೂರ್ಣವಾಗಿ ತಿಳಿ ಹೇಳಬೇಕು. ಶಾಲೆಯ ಪಠ್ಯ ಪುಸ್ತಕಗಳಲ್ಲಿ ಕೇವಲ ಕೈ,ಕಾಲು, ಕಣ್ಣು, ಮೂಗಿನ ಕುರಿತು ವಿವರಿಸುತ್ತಾರೆಯೇ ಹೊರತು ಜನನಾಂಗಗಳ ಕುರಿತು ಯಾವುದೇ ವಿವರಣೆ ನೀಡುವುದಿಲ್ಲ. ನಿಮ್ಮ ಒಳ ಉಡುಪಿನೊಳಗಿರುವ ಅಂಗಗಳನ್ನು ಯಾರಿಗೂ ಮುಟ್ಟಲು ಬಿಡಬಾರದು ಎಂಬ ಅರಿವನ್ನು ಪ್ರತೀ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳುವುದು ಉತ್ತಮ.

ಮಕ್ಕಳಿಗೆ ಬೊಬ್ಬಿರಿಯಲು ಕಲಿಸಿ:

ಇಂದಿನ ಪೋಷಕರು ಮಕ್ಕಳು ಸ್ವಲ್ಪ ಜೋರಾಗಿ ಮಾತನಾಡಿದರೂ ಕೂಡಲೇ ಅವರನ್ನು ಗದರಿಸಿ ಸುಮ್ಮನಿರುವಂತೆ ಹೇಳುತ್ತಾರೆ. ಆದರೆ ನಿಮ್ಮ ಮಕ್ಕಳಿಗೆ ದಯವಿಟ್ಟು ಬೊಬ್ಬಿರಿಯಲು ಕಲಿಸಿ. ಯಾವುದೇ ಕಾರಣಕ್ಕು ಸುಮ್ಮನೆ ಅದುಮಿಟ್ಟು ಕೂರಲು ಕಲಿಸಬೇಡಿ. ಅಪರಿಚಿತರ ನಡುವೆ ಏನೇ ಅನಾಹುತಗಳು ಕಂಡು ಬಂದರೂ ಕೂಡಲೇ ಬೊಬ್ಬಿರಿದು ಪ್ರತಿಕ್ರಿಯಿಸುವಂತೆ ತಿಳಿಸಿ ಕೊಡಿ.

ಅಪರಿಚಿತರ ಮೊಬೈಲ್ ಫೋನ್ ಕೇಳಲು ಬಿಡಬೇಡಿ:

ಕೆಲವು ಮಕ್ಕಳು ಮನೆಗೆ ಯಾರಾದರೂ ಅಪರಿಚಿತರು ಬಂದರೆ ಕೂಡಲೇ ಅವರ ಬಳಿ ತೆರಳಿ ಅವರ ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡಲು ದುಂಬಾಲು ಬೀಳುವುದು ಸಾಮಾನ್ಯ. ಆದರೆ ದಯವಿಟ್ಟು ಈ ಪ್ರಕ್ರಿಯೆಗೆ ಕಡಿವಾಣ ಹಾಕಲು ಪ್ರಯತ್ನಿಸಿ. ಇದರಿಂದಲೂ ಸಾಕಷ್ಟು ಅನಾಹುತಗಳು ಸೃಷ್ಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಮಕ್ಕಳನ್ನು ತಾಯಿ, ತಂದೆ ಅಥವಾ ನಂಬಲರ್ಹ ವ್ಯಕ್ತಿಗಿದ್ದರೆ ಮಾತ್ರ ಸಂಬಂಧಿಕರ ಮನೆಗೆ ಕಳುಹಿಸಿ.

ಸದ್ಯ ಕಾಲ ಬದಲಾಗಿದೆ. ಎಲ್ಲವೂ ಹಿಂದಿನ ಕಾಲದಂತೆ ಸಮರ್ಪಕವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇಂಟರ್ನೆಟ್ ಯುಗದಲ್ಲಿ ಏನೇ ಅನಾಹುತಗಳೂ ಸಂಭವಿಸಬಹುದು. ಎಲ್ಲೆಲ್ಲೋ ಕೇಳಿದ್ದ ಘಟನೆಗಳು ಈಗ ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ನಮ್ಮ ಮನೆಯ ಪುಟ್ಟ ಮಕ್ಕಳನ್ನು ಕಾಪಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ನಾಚಿಕೆಯಿಂದಲೋ, ಮುಜುಗರದಿಂದಲೋ ಸುಮ್ಮನೆ ಕೂರಬೇಡಿ. ನಿಮ್ಮ ಮಕ್ಕಳಿಗೆ ತಿಳುವಳಿಕೆ ನೀಡುವಷ್ಟು ನೀಡಿ. ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ. ನಮ್ಮ ಮಗು ನಮ್ಮ ಮನೆಯ ದೀಪ… ದೀಪ ಆರದಂತೆ ಬೆಳಗಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ…

ಲೇಖನ: ಮುಆದ್ ಜಿ.ಎಂ ([email protected])

 

Leave a Reply

Your email address will not be published. Required fields are marked *