ಸುಮಲತಾಗೆ ಮತ್ತಷ್ಟು ಬಲ : ಬಿಜೆಪಿ ಬೆಂಬಲ ಬೆನ್ನಲ್ಲೇ ಕರ್ನಾಟಕ ರೈತ ಸಂಘವೂ ಕೂಡ ಬೆಂಬಲಕ್ಕೆ!

ನ್ಯೂಸ್ ಕನ್ನಡ ವರದಿ : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಹೈಕಮಾಂಡಿನ ಸೂಚನೆಯಂತೆ ಅಭಿಪ್ರಾಯ ಸಂಗ್ರಹ ಸಭೆ ನಡೆಸಿರುವ ಜಿಲ್ಲಾ ಬಿಜೆಪಿ ಘಟಕವು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೇಷರತ್ತಾಗಿ ಬೆಂಬಲಿಸುವ ಒಂದು ಸಾಲಿನ ನಿರ್ಣಯ ಮಾಡಿದೆ. ಸುಮಲತಾ ಪರ ಬಿಜೆಪಿ ಆಯ್ತು, ಈಗ ರೈತ ಸಂಘ ಕೂಡ ಬೆಂಬಲ ಘೋಷಿಸಿದೆ. ಸ್ವಾಭಿಮಾನ ಮಂಡ್ಯದ ಉಳಿವಿಗಾಗಿ ಹೊರಗಿನವರು ಬೇಡ ಎಂಬುದು ನಮ್ಮ ವಾದ. ಈ ಕಾರಣಕ್ಕಾಗಿ ಮಂಡ್ಯದ ಸೊಸೆ ಸುಮಲತಾ ಅವರಿಗೆ ರೈತಸಂಘದ ಬೆಂಬಲ ನೀಡಿದ್ದೇವೆ. ಆಕೆ ನಮ್ಮೂರಿನ ಸೊಸೆ ಎಂಬ ಹೆಮ್ಮೆಯೊಂದಿಗೆ ಕಣಕ್ಕೆ ಇಳಿಸಿದ್ದೇವೆ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ಸುಮಲತಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ಸುನೀತಾ ಪುಟ್ಟಣ್ಣಯ್ಯ, ಸುಮಲತಾ ಅವರಿಗೆ ರೈತ ಸಂಘ ಬೆಂಬಲ ನೀಡಿರುವುದಕ್ಕೆ ದಾಖಲೆಯಾಗಿ ಬೆಂಬಲ ಪತ್ರ ನೀಡಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಚ್‌.ಡಿ.ಚೌಡಯ್ಯ ಅವರಂಥ ಸಾಕಷ್ಟು ನಾಯಕರು ಜನ, ಜಿಲ್ಲೆಗಾಗಿ ದುಡಿದಿದ್ದಾರೆ. ಇಂಥವರ ನಡುವೆ ಹೊರಗಿನವರ ಅವಶ್ಯಕತೆ ಮಂಡ್ಯಕ್ಕಿಲ್ಲ ಎಂದು ಹೇಳಿದರು.

ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಸಂಘವು ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮ್ಯಾ ಅವರಿಗೂ ಬೆಂಬಲ ನೀಡಿತ್ತು. ಸುಮಲತಾ ಅಂಬರೀಶ್ ಅವರಿಗೆ ರೈತ ಸಂಘದ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ ಬೆಂಬಲ ಘೋಷಿಸಿದರು. ಚುನಾವಣೆ ಬಂದಾಗಲಷ್ಟೇ ರಾಜಕಾರಣಿಗಳು ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ. ರೈತರ ಬಗ್ಗೆ ಅತೀವ ಕಾಳಜಿ ತೋರಿಸುತ್ತಾರೆ. ಆದರೆ, ಅಧಿಕಾರಕ್ಕೆ ಬಂದಾಗ ಏನೂ ಮಾಡುವುದಿಲ್ಲ. ರೈತರ ದಾರಿತಪ್ಪಿಸುವ ಕೆಲಸವನ್ನು ನಿಯತ್ತಾಗಿ ಮಾಡುತ್ತಾರೆ. ಎಲ್ಲ ಪಕ್ಷಗಳಲ್ಲೂ ರೈತರಿದ್ದಾರೆ ಹೀಗಿದ್ದರೂ ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *