ಎರಡನೇ ಕ್ಷೇತ್ರವಾದ ವಾಯನಾಡ್ ನಲ್ಲಿಂದು ನಾಮಪತ್ರಿಕೆ ಸಲ್ಲಿಸಲು ಸಹೋದರಿ ಜೊತೆ ರಾಹುಲ್ ಗಾಂಧಿ !

ನ್ಯೂಸ್ ಕನ್ನಡ ವರದಿ : ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದು, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಕ್ಸಲರ ಬೆದರಿಕೆ ಕಾರಣ ವಯನಾಡ್‌ನ ಕಲ್ಪೆಟ್ಟ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ವಿಶೇಷ ರಕ್ಷಣಾ ಪಡೆ ಬಿಗಿ ಭದ್ರತೆ ಒದಗಿಸಿವೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಕ್ಸಲ್ ನಾಯಕನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು.

ಹೆಲಿಕಾಪ್ಟರ್ ಮೂಲಕ ಇಂದು ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಕೋಯಿಕ್ಕೋಡ್‌ನಿಂದ ಕಲ್ಪೆಟ್ಟ ಪಟ್ಟಣವನ್ನು ತಲುಪುವ ನಿರೀಕ್ಷೆಯಿದೆ. ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಹುಲ್‌ಗೆ ಜೊತೆ ಇರಲಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇರಳದ ಉಸ್ತುವಾರಿ ಮುಕುಲ್ ವಾಸ್ನಿಕ್ ಸಹ ಉಪಸ್ಥಿತರಿರಲಿದ್ದಾರೆ. ರೋಡ್‌ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ವಯನಾಡ್‌ನಲ್ಲಿ ರಾಹುಲ್ ಚುನಾವಣಾ ಪ್ರಚಾರದ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಏಪ್ರಿಲ್ 15ರ ಬಳಿಕ ಅವರು ಪ್ರಚಾರದಲ್ಲಿ ತೊಡಗುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಚೆನೈತ್ಲಾ, ಒಮ್ಮನ್ ಚಾಂಡಿ, ಮುಲ್ಲಪಲ್ಲಿ ರಾಮಚಂದ್ರನ್, ಐಯುಎಂಎಲ್ ನಾಯಕ ಪಿ. ಕುಣಲಿಕಟ್ಟು ಮತ್ತು ಇ. ಟಿ. ಮುಹಮ್ಮದ್ ಬಶೀರ್ ರಾಹುಲ್ ಅವರನ್ನು ಸ್ವಾಗತಿಸಿದರು. ರಾಹುಲ್ ವಯನಾಡ್​ನಿಂದ ಕಣಕ್ಕಿಳಿಯುತ್ತಿರುವುದು ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಚೆನೈತ್ಲಾ ಅವರು ಹೇಳಿದರು.

Leave a Reply

Your email address will not be published. Required fields are marked *