ಚುನಾವಣೆ ಕರ್ತವ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಕಾರನ್ನೂ ತಡೆಒಡ್ಡಿ ತಪಾಸಣೆ ನಡೆಸಿದ ಪೋಲಿಸರು!

ನ್ಯೂಸ್ ಕನ್ನಡ ವರದಿ : ರಾಜ್ಯದಾದ್ಯಂತ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಾಜಕೀಯ ರಂಗದಲ್ಲಿ ತೀವ್ರ ಸ್ವರೂಪದ ಚಟುವಟಿಕೆಗಳು ರಂಗೇರಿವೆ. ಅಂತೆಯೇ ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಪ್ರತಿ ವಾಹನದ ಮೇಲೂ ಹದ್ದಿನ ಕಣ್ಣಿಟ್ಟಿದೆ. ಇನ್ನು ಪ್ರತಿ ವಾಹನವನ್ನು ತಪಾಸಣೆಗೆ ಒಳಪಡಿಸುತ್ತಿರುವ ಚುನಾವಣಾ ಆಯೋಗದ ಒಂದು ತಂಡ ಸಾಮಾನ್ಯ ಜನರ ವಾಹನಗಳ ಜತೆಯಲ್ಲೇ ವಿವಿಐಪಿಗಳ ವಾಹನಗಳನ್ನೂ ತಪಾಸಣೆ ಮಾಡುತ್ತಿದ್ದು, ಬುಧವಾರ ಚನ್ನರಾಯಪಟ್ಟಣದ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಎಸ್ಯುವಿ ಕಾರನ್ನು ತಡೆಹಿಡಿದು ಪರಿಶೀಲನೆ ನಡೆಸಿತು.

ಪರಿಶೀಲನೆ ಪೂರ್ಣಗೊಳ್ಳುವವರೆಗೂ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಸಾಮಾಧಾನವಾಗಿ ಕುಳಿತಿದ್ದ ಕುಮಾರಸ್ವಾಮಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದರು. ಇನ್ನು ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಸಾಥ್ ನೀಡಲು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ಕುಮಾರಸ್ವಾಮಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚುನಾವಣಾ ಆಯೋಗದ ಕಣ್ಗಾವಲು ತಂಡ ಹೆದ್ದಾರಿಯಲ್ಲಿ ಮುಖ್ಯಮಂತ್ರಿಯವರ ಕಾರಿಗೆ ತಡೆಒಡ್ಡಿ ತಪಾಸಣೆ ನಡೆಸಿದೆ. ಪರಿಶೀಲನೆ ಬಳಿಕ ಸಿಎಂ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. ಹಾಸನ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್​ ಅವರು ವಿವಿಐಪಿ ಕಾರುಗಳನ್ನೂ ತಪಾಸಣೆ ಮಾಡುವಂತೆ ಜಿಲ್ಲೆಯ ಎಲ್ಲಾ ಚೆಕ್​ಪೋಸ್ಟ್​ಗಳ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ವಿವಿಐಪಿ ಕಾರುಗಳನ್ನೂ ತಡೆದು ತಪಾಸಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *