ಮೇಕೆದಾಟು ಪಾದಯಾತ್ರೆಗೆ ತಾತ್ಕಾಲಿಕ ಸ್ಥಗಿತ; ಮುಂದಿನ ದಿನಗಳಲ್ಲಿ ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಿಸುತ್ತೇವೆ: ಡಿ ಕೆ ಶಿವಕುಮಾರ್

ರಾಮನಗರ: ಕಾವೇರಿ ನೀರಿಗಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ, ಕೋವಿಡ್ ಮೂರನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕ ಸ್ಥಗಿತ ನೀಡುತ್ತಿದ್ದೇವಷ್ಟೆ, ಮುಂದಿನ ದಿನಗಳಲ್ಲಿ ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಿಸುತ್ತೇವೆ, ಹಾಗೂ ಪಾದಯಾತ್ರೆ ಅಂತ್ಯ ಮಾಡಲು ನಿರ್ಧರಿಸಿದ ಸ್ಥಳದಲ್ಲಿಯೇ ಕೊನೆಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಚರ್ಚೆ ನಡೆಸಿ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಜನರೇ ನಮಗೆ ಮುಖ್ಯ, ಅವರ ಹಿತದೃಷ್ಟಿಯಿಂದ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಹಾಕುತ್ತಿದ್ದೇವೆ ಹೊರತು ರಾಜ್ಯ ಸರ್ಕಾರದ ಕೇಸಿಗೆ ಹೆದರಿ ಅಲ್ಲ, ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂಬುದು ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ಹಳೆಯ ರಾಷ್ಟ್ರೀಯ ಪಕ್ಷವಾಗಿದ್ದು ಯಾವತ್ತಿಗೂ ಜನತೆಗೆ ಪರವಾಗಿ ನಿಂತಿದೆ, ಇನ್ನು ಮುಂದೆಯೂ ನಿಲ್ಲುತ್ತದೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಮಗೂ ಜವಾಬ್ದಾರಿಯಿದೆ. ನಾಡು-ನುಡಿ, ಜಲ, ನೆಲದ ರಕ್ಷಣೆಯ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಹೋರಾಟದಲ್ಲಿ ಯಾವತ್ತಿಗೂ ಮುಂಚೂಣಿಯಲ್ಲಿರುತ್ತದೆ. ಹೋರಾಟ ಎಂಬುದು ಕಾಂಗ್ರೆಸ್ ಪಕ್ಷದ ರಕ್ತದಲ್ಲಿಯೇ ಇದೆ, ಇಂದು ತಾತ್ಕಾಲಿಕ ಸ್ಥಗಿತ ನೀಡಿದ್ದೆ ಹೊರತು ಮೇಕೆದಾಟು ಯೋಜನೆ ಪರ ನಮ್ಮ ಹೋರಾಟ ಈಡೇರುವವರೆಗೆ ಮುಂದುವರಿಯುತ್ತದೆ ಎಂದರು.

ಬಿಜೆಪಿಯವರು ಪಕ್ಷಪಾತಿಗಳಂತೆ ವರ್ತಿಸಬಾರದು. ಕೊರೋನಾ ಮೂರನೇ ಅಲೆ ಆರಂಭವಾಗಿದ್ದರೂ ಬಿಜೆಪಿಯವರ ಸಭೆ-ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರಲಿಲ್ಲ. ಆಗಲೇ ನಿರ್ಬಂಧ ಹೇರಿದ್ದರೆ 3ನೇ ಅಲೆ ಇಷ್ಟೊಂದು ಹರಡುವ ಸಾಧ್ಯತೆಯಿತ್ತೇ ಎಂದು ಪ್ರಶ್ನಿಸಿದರು.

ಮೂರು ದಿನ ಮೌನ ಎಂದಿದ್ದೇ. ವಿಧಿಯಿಲ್ಲದೇ ಇಂದು ಮೌನ ಮುರಿಯುತ್ತಿದ್ದೇನೆ. ಕೊರೊನಾ ಸೋಂಕಿತ ಡಿಸಿಯ ನೋಟಿಸ್​ ನೀಡಲು ಬಂದಿದ್ದರು. ರಾಮನಗರ ಎಸಿ, ಡಿವೈಎಸ್​ಪಿ ನೋಟಿಸ್ ನೀಡಲು ಬಂದಿದ್ದರು. ಕೊರೊನಾ ಹಿನ್ನೆಲೆ ಡಿಸಿ ಮನೆಯಿಂದ ಹೊರಬಂದಿರಲಿಲ್ಲ. ಆದರೆ ಸೋಂಕಿತ ಡಿಸಿ ಸಹಿಯುಳ್ಳ ನೋಟಿಸ್​ ನೀಡಿದ್ದಾರೆ ಎಂದರು.

Leave a Reply

Your email address will not be published. Required fields are marked *