ಯೋಗಿ ಆದಿತ್ಯನಾಥ್ ಸಂಪುಟದ ಸಚಿವರ ರಾಜೀನಾಮೆ ಪರ್ವ ಜನವರಿ 20ರ ವೇಳೆಗೆ ಈ ಸಂಖ್ಯೆ 18 ಕ್ಕೆ ಏರಲಿದೆ: ಓಂ ಪ್ರಕಾಶ್ ರಾಜ್‌ಭರ್

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದ ಸಚಿವರ ರಾಜೀನಾಮೆ ಪರ್ವ ಮುಂದುವರೆದಿದ್ದು, ಪ್ರತಿದಿನ ಒಂದರಿಂದ ಇಬ್ಬರು ಸಚಿವರು ರಾಜೀನಾಮೆ ನೀಡುತ್ತಾರೆ ಮತ್ತು ಜನವರಿ 20 ರ ವೇಳೆಗೆ ಈ ಸಂಖ್ಯೆ 18 ಕ್ಕೆ ಏರಲಿದೆ ಎಂದು ಎಸ್ ಬಿಎಸ್ ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಬುಧವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಅವರ ರಾಜೀನಾಮೆಯನ್ನು ಸ್ವಾಗತಿಸಿದ ರಾಜ್‌ಭರ್, 2017 ರಲ್ಲಿ ಸರ್ಕಾರಕ್ಕೆ ಸೇರಿದ ಕೆಲವೇ ದಿನಗಳಲ್ಲಿ ದಲಿತರು, ಹಿಂದುಳಿದವರು ಮತ್ತು ಸಮಾಜದ ವಂಚಿತ ವರ್ಗಗಳ ಬಗ್ಗೆ ಬಿಜೆಪಿಯ ನಿರಾಸಕ್ತಿಯನ್ನು ನಾನು ಅರಿತುಕೊಂಡೆ. ಆದರೆ ಈ ಜನರು ಇಷ್ಟು ದಿನ ಪಕ್ಷ ತೊರೆಯಲು ಕಾಯುತ್ತಿದ್ದರು ಮತ್ತು ಈಗ ಯಾವುದೇ ಭರವಸೆಯಿಲ್ಲದೆ ತೊರೆಯುತ್ತಿದ್ದಾರೆ” ಎಂದು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಹೇಳಿದ್ದಾರೆ.

2022ರ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ರಾಜಭರ್ ಕೈಜೋಡಿಸಿದ್ದಾರೆ. ಅರಣ್ಯ ಮತ್ತು ಪರಿಸರ ಸಚಿವ ದಾರಾ ಸಿಂಗ್ ರಾಜೀನಾಮೆಯ ನಂತರ ಟಿವಿ ಚಾನೆಲ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಪ್ರತಿದಿನ ಬಿಜೆಪಿ ಸಂಪುಟದ ಒಂದು ಅಥವಾ ಎರಡು ವಿಕೆಟ್‌ಗಳು ಬೀಳುತ್ತವೆ ಮತ್ತು ಜನವರಿ 20 ರ ವೇಳೆಗೆ ಈ ಸಂಖ್ಯೆ ಒಂದೂವರೆ ಡಜನ್‌ಗೆ ತಲುಪುತ್ತದೆ ಎಂದರು.

ಕಳೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ರಾಜ್‌ಭರ್ ಅವರು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿದ್ದರು ಮತ್ತು ಅವರ ಪಕ್ಷವು ಆಗ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು.

Leave a Reply

Your email address will not be published. Required fields are marked *