ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸಮನ್ವಿ ದಾರುಣ ಸಾವು

ಬೆಂಗಳೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ದಾರುಣವಾಗಿ ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.

ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಅಮೃತಾ ನಾಯ್ಡು. ತಾಯಿ ಅಮೃತಾಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಏನಿದು ಘಟನೆ?
ಲಾರಿ ಚಾಲಕ ಕುಮಾರಸ್ವಾಮಿ ಅವರನ್ನು ಲೇಔಟ್ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ದ್ವಿಚಕ್ರ ವಾಹನದಲ್ಲಿ ಅಮ್ಮ ಮಗಳು ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಬಂದು ಗುದ್ದಿದೆ, ಲಾರಿ ಚಕ್ರಕ್ಕೆ ಸಮನ್ವಿ ಸಿಲುಕಿದ್ದಳು ಎನ್ನಲಾಗಿದೆ.

ಬೇಸರ ಹೊರಹಾಕಿದ ನಟಿ ತಾರಾ
ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿನಟಿ ತಾರಾ ಕೂಡ ತೀರ್ಪುಗಾರರು. ಸಮನ್ವಿ ಸಾವಿನ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಅವರು “ಅಮೃತಾ ನಾಯ್ಡು ಬಹಳ ಪ್ರತಿಭಾವಂತ ಹುಡುಗಿ. ಅಮೃತಾ ನಾಯ್ಡು ಹರಿಕಥೆ ಮಾಡುತ್ತಿದ್ದರು. ಅಮೃತಾ ಗರ್ಭಿಣಿ, ಹೀಗಾಗಿ ಅವರು ಶೋನಲ್ಲಿ ಭಾಗವಹಿಸೋದು ಕಷ್ಟ ಅಂತ ಅವರ ಮನವಿ ಮೇರೆಗೆ ಎಲಿಮಿನೇಟ್ ಮಾಡಿದ್ದೆವು. ಅಮೃತಾ ನಾಯ್ಡು ಮೊದಲ ಮಗು ಕಳೆದುಕೊಂಡ ನೋವಿನಲ್ಲಿದ್ರು. ಆ ನಂತರ ಸಮನ್ವಿ ನಮಗೆ ದೇವರು ಕೊಟ್ಟ ವರ ಎಂದು ಅಮೃತಾ ಹೇಳಿದ್ದರು. ನಾವೆಲ್ಲ ಸೆಟ್‌ನಲ್ಲಿ ಒಂದೇ ಕುಟುಂಬದ ರೀತಿ ಇದ್ದೆವು. ಈಗ ಹೀಗಾಗಿರೋದು ನಿಜಕ್ಕೂ ಬೇಸರ ತಂದಿದೆ” ಎಂದು ನಟಿ ತಾರಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅಮೃತಾ ನಾಯ್ಡು ನಟನೆ
‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಅಮೃತಾ, ಸಮನ್ವಿ ಒಳ್ಳೆಯ ಆಟ ಆಡಿದ್ದರು. ಅಮೃತಾ, ಸಮನ್ವಿ ಹರಿಕಥೆ ಕೂಡ ಮಾಡಿದ್ದರು, ಅಮೃತಾ ಪ್ರತಿಭೆ ಕಂಡು ಎಲ್ಲರೂ ಚಪ್ಪಾಳೆ ತಟ್ಟಿದ್ದರು. ‘ಪ್ರಯತ್ನಪಡೋಣ, ಧುಮುಕೋಣ’ ಎಂದು ನಟಿ ಅಮೃತಾ ನಾಯ್ಡು ಅವರು ಚಿತ್ರರಂಗಕ್ಕೆ ಕಾಲಿಟ್ಟು, 25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅಮೃತಾ ನಟಿಸಿದ್ದಾರೆ. ‘ಗಂಗೋತ್ರಿ’ ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿದೆ. ಪುಣ್ಯಕೋಟಿ, ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಅಮೃತ ವರ್ಷಿಣಿ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಅಮೃತಾ ಬಣ್ಣ ಹಚ್ಚಿದ್ದಾರೆ.

ಅಮೃತಾ ನಾಯ್ಡು ಅವರದ್ದು ಅರೇಂಜ್ ಮ್ಯಾರೇಜ್. ರೂಪೇಶ್ ಎಂಬುವವರನ್ನು ಅಮೃತಾ ಮದುವೆಯಾಗಿದ್ದಾರೆ. ಅಮೃತಾ ಸುಬ್ಬಯ್ಯ ನಾಯ್ಡು, ಲಕ್ಷ್ಮೀ ಬಾಯಿ ಅವರು ಮೊಮ್ಮಗಳು ಕೂಡ ಹೌದು. ಚಿತ್ರರಂಗದ ಮೊದಲ ನಾಯಕಿ ಲಕ್ಷ್ಮೀಬಾಯಿ. ಸುಬ್ಬಯ್ಯ ನಾಯ್ಡು ಅವರು ಕನ್ನಡದ ಮೊದಲ ಹೀರೋ, ಮೂಕಿ ಚಿತ್ರ ಮಾಡಿದ್ದು ಕೂಡ ಅವರೇ. ಅಮೃತಾ ನಾಯ್ಡು ಅವರ ಅಜ್ಜಿಯ ತಂದೆ (ತಾಯಿಯ ತಾಯಿ).

Leave a Reply

Your email address will not be published. Required fields are marked *