ಕರ್ನಾಟಕದ ಜನತೆಗೆ ಮಾತ್ರ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವುದನ್ನು ಮರೆತು ಬಿಟ್ಟ ಪ್ರಧಾನಿ ನರೇಂದ್ರ ಮೋದಿ !

ಹೊಸದಿಲ್ಲಿ: ಇಂದು ದೇಶದೆಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿದೆ. ದೇಶದ ವಿವಿಧೆಡೆ ಅಲ್ಲಿನ ಸಂಪ್ರದಾಯಕ್ಕನುಗುಣವಾಗಿ ಸಂಕ್ರಾಂತಿ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬಕ್ಕೆ ಗಣ್ಯರು ನಾಡಿನ ಜನತೆಗೆ ಶುಭಕೋರುತ್ತಾರೆ. ಅಂತೆಯೇ ಪ್ರತೀ ವರ್ಷ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕನ್ನಡಿಗರನ್ನು ಮರೆತು ಬಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಗುಜರಾತ್, ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ -ತೆಲಂಗಾಣ ರಾಜ್ಯಗಳಿಗೆ ಆಯಾ ಭಾಷೆಗಳಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಅದರೆ ಮಕರ ಸಂಕ್ರಾಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲ್ಪಡುವ ಕರ್ನಾಟಕದ ಜನತೆಗೆ ಮಾತ್ರ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವುದನ್ನು ಮರೆತು ಬಿಟ್ಟಿದ್ದಾರೆ. ಇದರಿಂದ ಸಹಜವಾಗಿಯೇ ಕನ್ನಡಿಗರಿಗೆ ಬೇಸರ ಉಂಟಾಗಿದೆ. ಇದರ ಜೊತೆಗೆ ಮಕರ ಸಂಕ್ರಾಂತಿಯ ದಿನ ಮಕರ ಜ್ಯೋತಿ ಕಾಣುವ ಅಯ್ಯಪ್ಪ ಸ್ವಾಮಿಯ ದೇಗುಲ ಇರುವ ನಾಡು ಕೇರಳ ರಾಜ್ಯಕ್ಕೂ ಪ್ರಧಾನ ಮಂತ್ರಿ ಶುಭಾಶಯ ಕೋರಿಲ್ಲ.

ಆಯಾ ಭಾಷೆಗಳಲ್ಲಿ ಮಕರ ಸಂಕ್ರಾಂತಿಯ ಶುಭಾಶಯ ಕೋರುವುದಕ್ಕೂ ಮುನ್ನ ಮಾಡಿರುವ ಟ್ವೀಟ್‌ನಲ್ಲಿ ಮೋದಿ ಅವರು, ‘ಭಾರತದಾದ್ಯಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುವ ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಈ ಹಬ್ಬಗಳಿಗೆ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.’ ಇದರ ಬಳಿಕ ತೆಲುಗು, ತಮಿಳು, ಅಸ್ಸಾಮಿ, ಗುಜರಾತಿ ಸೇರಿ ಇತರ ಭಾಷೆಗಳಲ್ಲಿ ಶುಭಾಶಯ ಕೋರಿದ್ದಾರೆ. ಆದರೆ ಕನ್ನಡ ಮತ್ತು ಮಲಯಾಳಂ ಭಾಷಿಕರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವುದನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ.

Leave a Reply

Your email address will not be published. Required fields are marked *